ಹಾಸನ: ಹೇಮಾವತಿ ಜಲಾಶಯದ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡಿ ಅಗತ್ಯ ಭೂ ದಾಖಲೆಗಳನ್ನು ನೀಡಬೇಕೆಂದು ಒತ್ತಾಯಿಸಿ ಸಂತ್ರಸ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹೇಮಾವತಿ ಜಲಾಶಯ ನಿರ್ಮಾಣವಾಗಿ 50 ವರ್ಷ ಕಳೆದರೂ ಪರಿಹಾರ ಸಿಗದೆ ಭೂಮಿ ಕಳೆದುಕೊಂಡವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂತ್ರಸ್ತರಿಗೆ ಭೂಮಿ ನೀಡಿದ್ದರೂ ದರಖಾಸ್ತು ಪೋಡಿ ಮಾಡಿಕೊಡದೆ ಇರುವುದರಿಂದ ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ. ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷೃದಿಂದ ಇಷ್ಟು ವರ್ಷ ಕಳೆದರೂ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.
ಎಚ್‌ಆರ್‌ಪಿ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ತನಿಖೆ ವೇಳೆ 4 ಸಾವಿರ ಸಂತ್ರಸ್ತರ ಮಂಜೂರಾತಿ ಬಗ್ಗೆ ನೈಜತೆ ಇಲ್ಲವೆಂದು ಹೇಳಲಾಗಿದೆ. ಹಲವು ಸಂತ್ರಸ್ತರಿಗೆ ನೋಟಿಸ್ ಕೂಡ ನೀಡಲಾಗಿದೆ. ಜಮೀನು ಮಂಜೂರು ಮಾಡುವ ವೇಳೆ ಅಧಿಕಾರಿಗಳು ಕಣ್ಮುಚ್ಚಿ ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷದಿಂದ ನೈಜ ಸಂತ್ರಸ್ತರು ಸಮಸ್ಯೆ ಎದುರಿಸುವಂತಾಗಿದೆ. ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅರ್ಹರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿದರು.
ಎಚ್‌ಆರ್‌ಪಿ ಯೋಜನೆಗೆ ಭೂಮಿ ನೀಡಿದ ಹಲವು ರೈತರಿಗೆ ಇಂದಿಗೂ ಪೋಡಿ ಮಾಡಿಕೊಟ್ಟಿಲ್ಲ. ಈ ಕಾರಣದಿಂದ ರೈತರಿಗೆ ಬ್ಯಾಂಕ್, ಸಹಕಾರ ಸಂಘಗಳಲ್ಲಿ ಸಾಲ ಸೌಲಭ್ಯ, ಬೆಳೆ ಪರಿಹಾರ ಸೇರಿ ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆದುಕೊಳ್ಳಲಾಗದೆ ವಂಚಿತರಾಗಿದ್ದಾರೆ. ತ್ವರಿತವಾಗಿ ಪೋಡಿ ಮಾಡಿ ದಾಖಲೆ ನೀಡಬೇಕೆಂದು ಸಂತ್ರಸ್ತರು ಆಗ್ರಹಿಸಿದರು.
ವರ್ಷಾನುಗಟ್ಟಲೇ ಕಚೇರಿಗೆ ಅಲೆದಾಟ ನಡೆದೂ ಪರಿಹಾರ ಸಿಗಲಿಲ್ಲ. ಅಧಿಕಾರಿಗಳ ನಿರ್ಲಕ್ಷೃವೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.