ಜಿಲ್ಲೆ

ರಾಜ್ಯಸರ್ಕಾರದ ವಿರುದ್ಧ ರೈತಾಕ್ರೋಶ: ದೇವನಹಳ್ಳಿಯಲ್ಲಿ ನಡೆದ ಘಟನೆಗೆ ಖಂಡನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ರೈತರು ಮತ್ತು ಹೋರಾಟಗಾರರ ಮೇಲೆ ನಡೆದ ಪೊಲೀಸರ ದಬ್ಬಾಳಿಕೆ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಯಿತು.

ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ರೈತ, ಪ್ರಗತಿಪರ ಹಾಗೂ ನಾಗರಿಕ ಸಂಘಟನೆಗಳು ಕೆಲಕಾಲ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆ ನಡೆಸಿದರು. ಅಂತೆಯೇ ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದೇವನಹಳ್ಳಿ ಬುಧವಾರ ಅತ್ಯಂತ ಶಾಂತಿಯುತವಾಗಿ ನಡೆದಿದ್ದ ರೈತರ ಪ್ರತಿಭಟನೆಯನ್ನು ವಿಪರೀತ ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಪ್ರಯತ್ನವನ್ನು ರಾಜ್ಯಸರ್ಕಾರ ನಡೆಸಿದೆ. ಮಹಿಳೆಯರು, ಮಕ್ಕಳನ್ನೂ ಒಳಗೊಂಡು ಎಲ್ಲ ಮುಂದಾಳುಗಳನ್ನೂ ಅನಾಗರಿಕರಂತೆ ಎಳೆದಾಡಿ ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಂತಿಯುತ ಪ್ರತಿಭಟನಾ ಸಮಾವೇಶದ ಮೇಲೆ ನಡೆಸಲಾಗಿರುವ ಪೊಲೀಸ್ ದೌರ್ಜನ್ಯ ಮತ್ತು ಕೃಷಿ ಭೂಮಿಯನ್ನು ರೈತರಿಂದ ಒತ್ತಾಯಪೂರ್ವಕವಾಗಿ ಕಸಿಯುವ ಸರ್ಕಾರದ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದು ಘೋಷಿಸಿದರು.

ಅಭಿವೃದ್ಧಿ ಹೆಸರಲ್ಲಿ ರಿಯಲ್ ಎಸ್ಟೇಟ್ ದಂಧೆಕೋರ ಬಂಡವಾಳಿಗರಿಗೆ ಲಾಭ ಮಾಡಿಕೊಡಲು ಕೃಷಿ ಮತ್ತು ರೈತರ ಬದುಕನ್ನು ನಾಶ ಮಾಡಿ ಅಸಂಖ್ಯಾತ ರೈತ ಸಮುದಾಯವನ್ನು ಬೀದಿಪಾಲು ಮಾಡಲು ಹೊರಟಿರುವ ರಾಜ್ಯಸರ್ಕಾರದ ಈ ಹೀನ ನಡೆಯನ್ನು ರೈತರು ಮತ್ತು ಕೃಷಿಯ ಬಗ್ಗೆ ಗೌರವ ಇರುವ ಎಲ್ಲರೂ ಪ್ರತಿಭಟಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ರೈತರು, ದಲಿತರು, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ, ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮದ ಭೂಮಿಯನ್ನು ಬಂಡವಾಳಿಗರ ಒಪ್ಪಿಸಲು ನಾಚಿಕೆಡಿನ ಸಂಗತಿ. ರೈತ, ಕಾರ್ಮಿಕ, ದಲಿತ, ಮಹಿಳಾ ಹಾಗೂ ಜನ ವಿರೋಧಿ ಸರ್ಕಾರಗಳ ತುಂಬಾ ದಿನ ಅಧಿಕಾರ ನಡೆಸಲು ಸಾಧ್ಯವಿಲ್ಲ. ಈ ನೆಲ ಇಂತಹ ದರ್ಪ ದೌರ್ಜನ್ಯವನ್ನು ಮೆಟ್ಟಿ ನಿಂತ ಇತಿಹಾಸವನ್ನು ನೋಡಿದೆ. ಸಿದ್ದರಾಮಯ್ಯ ಸರ್ಕಾರ ಮುಂದಿನ ಪರಿಣಾಮ ಎದುರಿಸಲು ಸಿದ್ಧವಾಗಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಹೋರಾಟಗಾರರೊಂದಿಗೆ ಹೀನಾಯವಾಗಿ ವರ್ತಿಸಿ ಅನಗತ್ಯ ಬಲಪ್ರಯೋಗ ಮಾಡಿದ ಡಿಸಿಪಿ ಸಜಿತ್ ಅವರನ್ನು ಅಮಾನತುಗೊಳಿಸಬೇಕು. ಡಿಸಿಪಿ ಮತ್ತು ಪೊಲೀಸರ ಅತಿರೇಕದ ವರ್ತನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಇಲ್ಲವೇ ಹೋರಾಟಗಾರರೆಲ್ಲರನ್ನೂ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಸಿಪಿಐಎಂ ಕೃಷ್ಣೇಗೌಡ, ಸಿಐಟಿಯು ಸಿ.ಕುಮಾರಿ, ಕರ್ನಾಟಕ ಪ್ರಾಂತ ರೈತಸಂಘದ ಭರತ್‌ರಾಜ್, ಕರ್ನಾಟಕ ಜನಶಕ್ತಿ ಪೂರ್ಣಿಮಾ, ಸಿದ್ದರಾಜು, ಮುಖಂಡರಾದ ಲತಾ ಶಂಕರ್, ಹನುಮೇಶ್ ಇತರರಿದ್ದರು.