ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ವಸತಿ ಹಕ್ಕುಗಳ ವಂಚಿತರ ಪ್ರತಿಭಟನೆ

ಮಂಡ್ಯ: ನಗರದ ವಿವಿಧ ಶ್ರಮಿಕನಗರ(ಸ್ಲಂ)ಗಳಲ್ಲಿ ನಿವೇಶನ ರಹಿತವಾಗಿ ವಾಸಿಸುತ್ತಿರುವ ಶ್ರಮಿಕರಿಗೆ ಮೂಲ ಸೌಲಭ್ಯವುಳ್ಳ ನಿವೇಶನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕುಗಳ ವಂಚಿತರ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ತೆರಳಿ ಧರಣಿ ನಡೆಸಿದರು. ಕಾಳಪ್ಪ ಬಡಾವಣೆ, ಗುರುಮಠ, ನ್ಯೂತಮಿಳು ಕಾಲನಿ, ಕಾಳಿಕಾಂಬ, ನಾಲಬಂದವಾಡಿ, ಎಸ್.ಡಿ.ಜಯರಾಂ ಬಡಾವಣೆ, ಹೊನ್ನಯ್ಯ ಬಡಾವಣೆ, ಮದ್ದೂರು ತಮಿಳು ಕಾಲನಿ, ಜಿಲ್ಲಾಸ್ಪತ್ರೆ ಸಮೀಪದ ತಮಿಳು ಕಾಲನಿ, ಶ್ರಮಿಕ ನಗರಗಳಲ್ಲಿ ಸಂಘಟನೆ ಸರ್ವೇ ನಡೆಸಿದೆ. ಈ ವೇಳೆ ಹಲವು ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸವಿದ್ದರೆ, ಒಂದೇ ಸಂಸಾರದಲ್ಲಿ 2 ರಿಂದ 3 ಕುಟುಂಬ ಹೆಚ್ಚುವರಿಯಾಗಿ ವಾಸ ಮಾಡುತ್ತಿವೆ. ಒಟ್ಟು 200 ಕುಟುಂಬ ನಿವೇಶನ ವಂಚಿತರಾಗಿವೆ ಎಂದರು.

ಈ ಹಿನ್ನೆಲೆಯಲ್ಲಿ ಮಂಡ್ಯದ ಸುತ್ತಳತೆಯಲ್ಲಿ ಸರ್ಕಾರಿ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಲು 6 ಎಕರೆ ಜಾಗ ಮೀಸಲಿಟ್ಟು, ತುರ್ತು ಕ್ರಮಕೈಗೊಂಡು ಜಿಲ್ಲಾಡಳಿತ ಹಾಗೂ ಶಾಸಕರು ಹಂಚಿಕೆ ಮಾಡಲು ಮುಂದಾಗಬೇಕು. ಲ್ಯಾಂಡ್ ಆರ್ಮಿ ಸ್ಲಂ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಕುಟುಂಬ 60 ವರ್ಷದಿಂದ ವಾಸ ಮಾಡುತ್ತಿದ್ದರೂ ಯಾವ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ. ಇವರಿಗೆ ಹಕ್ಕುಪತ್ರ ಹಾಗೂ ವಸತಿಗಳನ್ನು ನೀಡಬೇಕು. ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಬೋರೆಯ ಅಲೆಮಾರಿ ಹಕ್ಕಿ ಪಿಕ್ಕಿ ಸಮುದಾಯದ ಸುಮಾರು 74 ಕುಟುಂಬದ ಪೈಕಿ 45 ಕುಟುಂಬಕ್ಕೆ ಹಕ್ಕುಪತ್ರ ನೀಡಲಾಗಿದೆ. ಉಳಿದವರಿಗೆ ದಾಖಲೆ ಪಡೆದು 30*40 ರಂತೆ ನಿವೇಶನ ಹಂಚಿಕೆ ಮಾಡಿ ವಸತಿ ಜತೆ ಎಲ್ಲ ರೀತಿಯ ಮೂಲ ಹಕ್ಕುಗಳನ್ನು ತಕ್ಷಣ ನೀಡಲೇಬೇಕು ಸೇರಿದಂತೆ 12 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದರಾಜು, ಶ್ರಮಿಕ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಪ್ರಕಾಶ್, ಮಹಿಳಾ ಮುನ್ನಡೆಯ ಬಿ.ಎಸ್.ಶಿಲ್ಪಾ, ಮುಖಂಡರಾದ ವೈದುನ, ನಾಗರತ್ಮಮ್ಮ, ಚಂದ್ರಶೇಖರ್, ರವಿ ಇತರರಿದ್ದರು.