ಜಿಲ್ಲೆ

ಒತ್ತುವರಿದಾರರ ವಿರುದ್ಧ ದೂರು ದಾಖಲಿಸಿ: ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ ಕಾರ್ಯಕರ್ತರ ಪ್ರತಿಭಟನೆ

ಮಂಡ್ಯ: ಪರಿಶಿಷ್ಟ ಜಾತಿಯವರಿಗೆ ಜಮೀನು ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಗ್ರಹಿಸಿ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ ಕಾರ್ಯಕರ್ತರು ಜಾನುವಾರು ಮತ್ತು ಕೃಷಿ ಪರಿಕರಗಳೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮಳವಳ್ಳಿಯಿಂದ ವಾಹನಗಳಲ್ಲಿ ಮೇಕೆ, ಹಸುಗಳೊಂದಿಗೆ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡು ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಗೋಮಾಳಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಬೇಕು. ಮಂಜೂರಾತಿ ಪಡೆದಿರುವ ಪ.ಜಾತಿ ಜನರ ಜಮೀನನ್ನು ಪೋಡಿ ದುರಸ್ಥಿ ಮಾಡಿಕೊಡಬೇಕು. 50, 53, 57 ರಲ್ಲಿ ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ ಜನರಿಗೆ ಮಂಜೂರಾತಿ ಕ್ರಮ ವಹಿಸಬೇಕು. ಜೀತ ವಿಮುಕ್ತರಿಗೆ ಉಳುಮೆ ಮಾಡಲು ಸೂಕ್ತ ಭೂಮಿ ಮಂಜೂರಾತಿ ಮಾಡಿಕೊಡಬೇಕು. ಈಗಾಗಲೇ ಮನವಿ ಸಲ್ಲಿಸಿರುವ ಜೀತ ವಿಮುಕ್ತರಿಗೆ ಪ್ರತ್ಯೇಕ ಆರ್‌ಟಿಸಿ ನಮೂದಿಸಿಕೊಡಬೇಕು. ಪರಿಶಿಷ್ಟ ಜಾತಿಯವರಿಗೆ ಮಂಜೂರಾತಿಯಾಗಿ ಅನುಮತಿ ಇಲ್ಲದೆ ಮಾರಾಟವಾಗಿರುವ ಜಮೀನಿಗೆ ಜಿಲ್ಲಾಡಳಿತವೇ ಸುಮೋಟೋ ಕೇಸು ದಾಖಲಿಸಿ ನೊಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪುನಃ ನೀಡಬೇಕು ಎಂದು ಆಗ್ರಹಿಸಿದರು.

ಅರಣ್ಯ ಹಕ್ಕು ಕಾಯ್ದೆ 2006 ತಿದ್ದುಪಡಿ 2018ರನ್ವಯ ಪ.ಜಾತಿ ಮತ್ತು ಪಂಗಡದ ತಳವಾರ, ನೀರುಗಂಟಿ ಜಮೀನುಗಳನ್ನು ಮರು ಮಂಜೂರಾತಿ ಮಾಡಿಕೊಡಬೇಕು. ಮಳವಳ್ಳಿ ತಾಲೂಕು ಕಸಬಾ ಮತ್ತು ಬಿಜಿಪುರ ಹೋಬಳಿ ಕಾಡಂಚಿನ ಗ್ರಾಮಗಳ ಜಮೀನನ್ನು ಪೋಡಿ ದುರಸ್ಥಿ ಮಾಡಿಕೊಡಬೇಕು. ಭೂಮಿ ಕೋರಿ ಅರ್ಜಿ ಸಲ್ಲಿಸಿರುವ ಎಲ್ಲ ನಿವೃತ್ತ ಸೈನಿಕರಿಗೆ ಕೋಷ್ಠಕ 5ರಲ್ಲಿ ಗೋಮಾಳಗಳಲ್ಲಿ ಕಾಯ್ದಿರಿಸಬೇಕು. ಹಲಗೂರು ಹೋಬಳಿ ಬ್ಯಾಡರಹಳ್ಳಿ ಗ್ರಾಮದ ಗಿಂಡಿಕೆರೆ ಅರಣ್ಯ ಜಮೀನಿನಲ್ಲಿ ತಲ ತಲಾಂತರಗಳಿಂದ ಉಳುಮೆ ಮಾಡಿಕೊಂಡು ಬೇಸಾಯ ಮಾಡಿಕೊಂಡು ಬರುತ್ತಿರುವ ಪರಿಶಿಷ್ಟ ಜಾತಿ ಜನಾಂಗದವರಿಗೆ ಭೂಮಿ ಮಂಜೂರಾತಿ ಮಾಡಿ ಅವರ ಹೆಸರಿಗೆ ಆರ್‌ಟಿಸಿ ನಮೂದು ಮಾಡಿಸಿಕೊಡಬೇಕು ಎಂದು ಆಗ್ರಹ ಪಡಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ದೇವರಾಜು ದ್ರಾವಿಡ, ಗೋವಿಂದರಾಜ ಪಟ್ಲಿ, ಶಿವಣ್ಣ, ವೀರಭದ್ರಯ್ಯ, ಮರಿಸ್ವಾಮಿ, ರಮಾನಂದ್, ರಾಜೇಂದ್ರ, ಅನಂತಕುಮಾರ್, ಚಿಕ್ಕಹನುಮಮ್ಮ, ಸಾವಿತ್ರಮ್ಮ ಇದ್ದರು.