ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಉಚಿತ ಭಾಗ್ಯಗಳನ್ನು ನೀಡುವ ನೆಪದಲ್ಲಿ ರಾಜ್ಯದ ಬೊಕ್ಕಸ ಖಾಲಿ ಮಾಡಿದ್ದು, ಸಂಪನ್ಮೂಲಗಳ ಕೊರತೆ ಕಾರಣದಿಂದ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಗ್ಯಾರಂಟಿಗೆ ಮತ್ತಷ್ಟು ಬಲ ನೀಡಲು ಕಂದಾಯ ಸೇವೆಗಳು, ವಿದ್ಯುತ್ ದರ ಹಾಗೂ ಇಂಧನ ದರಗಳನ್ನು ಸರ್ಕಾರ ಹೆಚ್ಚಳ ಮಾಡಿದೆ ಎಂದು ರಿಕ್ಷಾ ಟೆಂಪೊ ಚಾಲಕ ಮಾಲೀಕರ ಸಂಘದ ಗೌರವಾಧ್ಯಕ್ಷ ರಾಜೇಶ್ ಬೋಳುಕಲ್ಲು ಹೇಳಿದರು.
ರಾಜ್ಯ ಸರ್ಕಾರ ಪೆಟ್ರೊಲ್ ಹಾಗೂ ಡೀಸೆಲ್ ಬೆಲೆ ಏರಿಸಿದ್ದ ವಿರುದ್ಧ ಬಿ.ಸಿ.ರೋಡಿನಲ್ಲಿ ನಡೆದ ವಿವಿಧ ವಾಹನ ಚಾಲಕ-ಮಾಲೀಕರ ಸಂಘದ ಜಂಟಿ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮಣಿಹಳ್ಳ ಹಾಗೂ ಕೃಷ್ಣ ಅಲ್ಲಿಪಾದೆ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದರು.
ಬಿಎಂಎಸ್ ರಿಕ್ಷಾ ಚಾಲಕ ಮಾಲೀಕ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್, ಟಾಂಟಾಂ ಬಿಎಂಬಿ ಸಂಘದ ಸುರೇಶ್ ಪೂಜಾರಿ, ಟೂರಿಸ್ಟ್ ಕಾರು ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಪಿಕಪ್ ಚಾಲಕ-ಮಾಲಕ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್, ಪ್ರಭಾಕರ ದೈವಗುಡ್ಡೆ, ಪದಾಧಿಕಾರಿಗಳಾದ ಕೃಷ್ಣ ಅಲ್ಲಿಪಾದೆ, ನಾರಾಯಣ, ಪ್ರಕಾಶ್, ಶ್ರೀಕಾಂತ್ ಪಾಣೆಮಂಗಳೂರು, ಹರೀಶ್ ಮತ್ತಿತರರಿದ್ದರು.
ಬಳಿಕ ತಾಲೂಕು ಕಚೇರಿ ತನಕ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದ್ದು, ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಟೂರಿಸ್ಟ್ ಕಾರು ಚಾಲಕ- ಮಾಲೀಕರ ಸಂಘ ಬಿ.ಸಿ.ರೋಡು, ಟೂರಿಸ್ಟ್ ವ್ಯಾನ್ ಚಾಲಕ- ಮಾಲೀಕರ ಸಂಘ, ಬಿಎಂಎಸ್ ರಿಕ್ಷಾ ಚಾಲಕ- ಮಾಲೀಕರ ಸಂಘ, ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಹಾಗೂ ಪಿಕಪ್ ಮಾಲೀಕರ ಸಂಘ, ಸಮಾನ ಬಿಎಂಬಿ ಸಂಘ, ಜಿತೋ ಬಿ.ಸಿ.ರೋಡು, ರಿಕ್ಷಾ ಡ್ರೈವರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಪ್ರತಿಭಟನೆ ನಡೆಯಿತು.
ವಾಹನಗಳ ತೆರಿಗೆ ಹೆಚ್ಚಳ, ಇನ್ಶೂರೆನ್ಸ್ ಹೆಚ್ಚಳ, ಇಂಧನ ದರ ಏರಿಕೆಯಿಂದಾಗಿ ವಾಹನಗಳನ್ನು ಇಟ್ಟುಕೊಳ್ಳುವಂತೆಯೇ ಇಲ್ಲ, ಮಾರಾಟ ಮಾಡುವಂತೆಯೂ ಇಲ್ಲ. ಪ್ರಸ್ತುತ ಬಡ ಚಾಲಕರು ಅತಂತ್ರರಾಗಿದ್ದು, ಸರ್ಕಾರ ಇಂಧನ ದರ ನಿರ್ಧಾರ ಶೀಘ್ರವೇ ರದ್ದುಗೊಳಿಸಬೇಕು. - ಸದಾನಂದ ಗೌಡ ನಾವೂರ, ಟೂರಿಸ್ಟ್ ಟೆಂಪೋ ಚಾಲಕ-ಮಾಲೀಕ ಸಂಘದ ಅಧ್ಯಕ್ಷ