ಮದ್ದೂರು: ಕಾಶ್ಮೀರದ ಶ್ರೀನಗರದ ಪಹಲ್ಗಾಮ್‌ನಲ್ಲಿ ಹಿಂದುಗಳನ್ನು ಗುರಿಯಾಗಿಸಿ ಉಗ್ರರು ಮಾಡಿದ ಹತ್ಯಾಕಾಂಡ ಖಂಡಿಸಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್ ಮಾತನಾಡಿ, ಕಾಶ್ಮೀರ ಶ್ರೀನಗರದ ಪಹಲ್ಗಾಮ್‌ಗೆ ಪ್ರವಾಸಕ್ಕೆ ತೆರಳಿದ್ದ ಹಿಂದುಗಳನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿರುವುದು ಆತಂಕಕಾರಿ ಸಂಗತಿಯಾಗಿದ್ದು, ಇಂತಹ ಘಟನೆಗಳು ಮುಂದೆ ನಡೆಯದಂತೆ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿರುವ ಉಗ್ರರನ್ನು ನಿರ್ನಾಮ ಮಾಡಲು ಪ್ರತಿಯೊಂದು ದೇಶವು ಚಿಂತನೆ ನಡೆಸಬೇಕು. ಎಲ್ಲ ದೇಶಗಳು ಒಗ್ಗೂಡಿ ಉಗ್ರರನ್ನು ನಿರ್ಮೂಲನೆ ಮಾಡುವ ಮೂಲಕ ಸಾರ್ವಜನಿಕರು ನೆಮ್ಮದಿಯಾಗಿ ಬದುಕು ನಡೆಸುವಂತೆ ಅವಕಾಶ ಕಲ್ಪಿಸಬೇಕು ಹಾಗೂ ಪಹಲ್ಗಾಮ್‌ನಲ್ಲಿ ಹಿಂದುಗಳನ್ನು ಹತ್ಯೆ ಮಾಡಿರುವ ಉಗ್ರರನ್ನು ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಕೀಲರಾದ ಪ್ರಿಯಾಂಕ ಅಪ್ಪುಗೌಡ, ಯೋಗಾನಂದ, ಸಂತೋಷ್, ರಾಮಕೃಷ್ಣೇಗೌಡ, ಬಾಲರಾಜು, ಚಲುವರಾಜು, ಪ್ರಸನ್ನ, ಮಹದೇವಪ್ಪ, ನಾಗೇಶ್ ಇದ್ದರು.