ಮಂಡ್ಯ: ಮದ್ದೂರಿನ ತಮಿಳು ಕಾಲನಿ ಜಾಗವನ್ನು ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ದೇಶ ಸ್ವಚ್ಛ ಮಾಡುವ ಜನತೆಗೆ ನಗರ ಕಟ್ಟಲು ದುಡಿಯುವ ಜನತೆಗೆ ವಾಸಕ್ಕೊಂದು ಸೂರಿಲ್ಲ. ಈ ದೇಶದ ಪ್ರಜೆಗಳು ನಾವು, ನಮಗೂ ಎಲ್ಲರಂತೆ ಬದುಕುವ ಸಂವಿಧಾನಬದ್ಧ ಹಕ್ಕು ಬೇಕೇ ಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಸಮಿತಿಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಸಿದ್ದರಾಜು ಮಾತನಾಡಿ, ಮದ್ದೂರಿನ ಕೆಇಬಿ ಕಚೇರಿ ಮುಂಭಾಗದಲ್ಲಿರುವ ತಮಿಳು ಕಾಲನಿಯಲ್ಲಿ ಸುಮಾರು 114 ಕುಟುಂಬ ಕಳೆದ 70 ವರ್ಷಗಳಿಂದ ವಾಸವಿದ್ದಾರೆ. ಇವರು ಪೌರಕಾರ್ಮಿಕರಾಗಿ, ದಿನಗೂಲಿ ಕಾರ್ಮಿಕರಾಗಿ, ಮೂಟೆ ಹೊರುವ ಕಾರ್ಮಿಕರಾಗಿ, ಮನೆ ಕಟ್ಟುವ ಶ್ರಮಿಕರಾಗಿ, ಸಮುದಾಯ ಭವನಗಳಲ್ಲಿ ಸ್ವಚ್ಛತಾ ಕಾರ್ಮಿಕರಾಗಿ, ಹೀಗೆ ಶ್ರಮಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭೂಮಿ ಹಕ್ಕಿಗಾಗಿ ತಲೆಮಾರುಗಳು ಕಳೆದರೂ ಇನ್ನೂ ಹೋರಾಡುತ್ತಲೇ ಇರಬೇಕಾದ ದುಸ್ಥಿತಿ ನಮ್ಮ ಕಣ್ಣ ಮುಂದೆ ಇದೆ ಎಂದು ವಿಷಾಧಿಸಿದರು.
1976ರಲ್ಲಿ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಘೋಷಣೆ ಮಾಡಲಾಗಿತ್ತು. ಆದರೆ, ಇಲ್ಲಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ದಬ್ಬಾಳಿಕೆಯಿಂದ ಮತ್ತು ಶ್ರಮಿಕ ನಿವಾಸಿಗಳ ರಕ್ಷಣೆ ಮಾಡಬೇಕಾದವರೇ ಶಾಮೀಲಾಗಿ ಎಸಗಿದ ಮೋಸದಿಂದಾಗಿ ಬಹಳ ಕಾಲ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೂ ವಾಸದ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿವಾಸಿಗಳು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಈ ನಿವಾಸಿಗಳಿಗೆ ಹಕ್ಕು ಪತ್ರವಿಲ್ಲದೆ ವಸತಿ ನಿರ್ಮಿಸಿಕೊಳ್ಳುವ ಯಾವ ಯೋಜನೆ ಅಡಿಯಲ್ಲೂ ಫಲಾನುಭವಿಗಳಾಗದೆ ತೀವ್ರ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೂಡಲೇ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಂಡು ನಮ್ಮ ಹಕ್ಕುಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಮುನ್ನಡೆ ಸಂಘಟನೆಯ ಜ್ಯೋತಿ, ಶ್ರಮಿಕ ಕಾರ್ಯಕರ್ತರಾದ ಚಂದ್ರು, ಕುಮಾರಿ, ರಘು, ಮಂಜು, ಗಣೇಶ, ಮಲ್ಲಿಕಾ, ಆನಂದ್‌ರಾಜ್, ದೇವರಾಜು, ಮಂಗಳ, ಕುಮಾರಿ, ಪುಟ್ಟಮ್ಮ, ಬೀರಮ್ಮ, ರೂಪಾ ಇತರರಿದ್ದರು.