ಹನೂರು: ಲೊಕ್ಕನಹಳ್ಳಿ ಗ್ರಾಮದಲ್ಲಿ ಬಸ್ ನಿಲ್ಲಿಸುವಂತೆ ಒತ್ತಾಯಿಸಿ ಶುಕ್ರವಾರ ಮಹಿಳಾ ಕೂಲಿ ಕಾರ್ಮಿಕರು ರೈತ ಸಂಘಟನೆ ಜತೆಗೂಡಿ ಜಡೇಸ್ವಾಮಿ ದೊಡ್ಡಿ ನಿಲ್ದಾಣದಲ್ಲಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕೂಲಿ ಕಾರ್ಮಿಕರು ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ರಸ್ತೆಗೆ ಅಡ್ಡಲಾಗಿ ಎತ್ತಿನಗಾಡಿ ಇರಿಸಿ ಬಸ್ ನಿಲ್ಲಿಸದಿರುವ ಬಗ್ಗೆ ಚಾಲಕ ಹಾಗೂ ನಿರ್ವಾಹಕರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅದರಲ್ಲೂ ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿರುವ ನಮಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತಿದೆ. ಆದರೆ ಗ್ರಾಮದಲ್ಲಿ ಸಾರಿಗೆ ಬಸ್ ನಿಲ್ಲಿಸದಿರುವುದರಿಂದ ಖಾಸಗಿ ಬಸ್‌ನಲ್ಲಿ ಹಣ ನೀಡಿ ಸಂಚರಿಸಬೇಕಿದ್ದು, ತುಂಬ ತೊಂದರೆಯಾಗಿದೆ. ಶಕ್ತಿ ಯೋಜನೆಯಿಂದ ವಂಚಿತರಾಗುತ್ತಿದ್ದೇವೆ. ಗ್ರಾಮದಿಂದ ಸುಮಾರು 40ಕ್ಕೂ ಹೆಚ್ಚು ಮಹಿಳೆಯರು ಪಿ.ಜಿ ಪಾಳ್ಯ, ಕಂಡಯ್ಯನಪಾಳ್ಯ ಹಾಗೂ ಈ ಭಾಗದ ಇತರ ಕಡೆಗಳ ಜಮೀನುಗಳಿಗೆ ಕೂಲಿ ಕೆಲಸಕ್ಕಾಗಿ ತೆರಳುತ್ತಾರೆ. ಆದರೆ ಬಸ್ ನಿಲ್ಲಿಸದಿರುವುದು ಎಷ್ಟರ ಮಟ್ಟಿಗೆ ಸರಿ?. ಇದರಿಂದ ಅನನುಕೂಲವಾಗುತ್ತಿದೆ. ಆದ್ದರಿಂದ ಇನ್ನು ಮುಂದಾದರೂ ಗ್ರಾಮದಲ್ಲಿ ಬಸ್ ನಿಲ್ಲಿಸಬೇಕು ಎಂದು ಚಾಲಕ ಹಾಗೂ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಬಳಿಕ ರೈತ ಮುಖಂಡರು ಘಟಕ ವ್ಯವಸ್ಥಾಪಕರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಈ ಮಾರ್ಗದಲ್ಲಿ ಸಂಚರಿಸುವ ಚಾಲಕರಿಗೆ ಲೊಕ್ಕನಹಳ್ಳಿಯಲ್ಲಿ ಕಡ್ಡಾಯವಾಗಿ ನಿಲ್ಲಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ರೈತ ಮುಖಂಡರಾದ ಪ್ರಕಾಶ್, ಪನೀರ್ ಸೆಲ್ವಂ, ಮನೋಹರ್, ಮಹಿಳಾ ಕೂಲಿ ಕಾರ್ಮಿಕರಾದ ಮಾಲಾ, ಮಣಿ, ಮಹದೇವಮ್ಮ, ಭಾಗ್ಯಾ, ಸುಧಾ ಇತರರು ಇದ್ದರು.