ಈಶ್ವರಮಂಗಲ: ಸರ್ವೆ ಗ್ರಾಮದ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ನೂತನ ಆಡಳಿತ ಮಂಡಳಿ ಹಿಂದು ವಿರೋಧಿ ನೀತಿ ಮತ್ತು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಭಕ್ತವೃಂದದ ವತಿಯಿಂದ ಭಾನುವಾರ ಭಜನಾ ಮಂದಿರದ ವಠಾರದಲ್ಲಿ ಪ್ರತಿಭಟನೆ ನಡೆಯಿತು.
ಈ ಧಾರ್ಮಿಕ ಕೇಂದ್ರವನ್ನು ರಾಜಕೀಯ ಗೊಳಿಸುವ ಹುನ್ನಾರ ಸ್ಥಳೀಯ ರಾಜಕೀಯ ಮುಖಂಡರ ಕುಮ್ಮಕ್ಕಿನಿಂದ ನಡೆಯುತ್ತಿದೆ. ಭಜನಾ ಮಂದಿರದ ಹೊಸ ಸಮಿತಿಯು ಹಿಂದಿನ ಬೈಲಾವನ್ನು ಕಾನೂನಿಗೆ ವಿರುದ್ಧವಾಗಿ ಬದಲಾವಣೆ ಮಾಡಿದ್ದು, ಮಂದಿರದ ವಠಾರದಲ್ಲಿ ಹಿಂದು ಧಾರ್ಮಿಕ ಕಾರ್ಯಕ್ರಮಗಳಿಗೆ ತಡೆಯೊಡ್ಡಲಾಗಿದೆ. ಮಂದಿರದ ನೇತೃತ್ವದಲ್ಲಿ ಊರಿನ ಯುವಕರ ತಂಡ ಕಬಡ್ಡಿ ಆಟವಾಡಿ ಗಳಿಸಿದ ಪ್ರಶಸ್ತಿ, ಫಲಕಗಳನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ಭಜನಾ ಮಂದಿರದ ಆಸ್ತಿಯನ್ನು ಸ್ಥಳೀಯ ಯುವಕ ಮಂಡಲದ ಆಸ್ತಿಯನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಭಕ್ತರು ಪ್ರತಿಭಟಿಸಿದರು.
ಶಾಸಕ ಸಂಜೀವ ಮಠಂದೂರು ಸಮಸ್ಯೆಯನ್ನು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಡಾ.ಎಂ.ಕೆ ಪ್ರಸಾದ್, ಮೋಹನ ರೈ ನರಿಮೊಗರು, ಸದಾಶಿವ ಭಂಡಾರಿ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸದಸ್ಯ ಶಿವರಂಜನ್, ಎಪಿಎಂಸಿ ಸದಸ್ಯರಾದ ರಾಧಾಕೃಷ್ಣ ರೈ ಬೂಡಿಯಾರು, ತ್ರಿವೇಣಿ ಪೆರ‌್ವೋಡಿ, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅರ್ಚಕ ಶ್ರೀರಾಮ ಕಲ್ಲೂರಾಯ, ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ವಕೀಲ ಚಿನ್ಮಯ ರೈ, ಬೆಳಿಯಪ್ಪ ಗೌಡ ಸರ್ವೆ, ಬಜರಂಗದಳದ ಜಿಲ್ಲಾಧ್ಯಕ್ಷ ಧನ್ಯ ಕುಮಾರ್ ಬೆಳಂದೂರು, ಸ್ವಸ್ತಿಕ್ ಮೇಗಿನಗುತ್ತು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಂದಿರದ ಬೈಲಾ ಲೋಪ, ಅವ್ಯವಹಾರಗಳ ತನಿಖೆ ನಡೆಸುವಂತೆ ಪತ್ರ ಬರೆದು ಜಿಲ್ಲಾ ಹಾಗೂ ತಾಲೂಕು ನೋಂದಣಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಭಜನಾ ಮಂದಿರದ ವಿಚಾರವನ್ನು ಸಚಿವರ ಗಮನಕ್ಕೆ ತಂದು ನೂರು ನ್ಯಾಯ ಒದಗಿಸಲಾಗುವುದು.
-ಸಂಜೀವ ಮಠಂದೂರು, ಶಾಸಕ