ಜಿಲ್ಲೆ

ಹಿರಿಯ ನಾಗರಿಕರಿಂದ ಧರಣಿ ಸತ್ಯಾಗ್ರಹ 4ರಂದು

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹಿರಿಯ ನಾಗರಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ. 4ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ರಾಜ್ಯದ ಎಲ್ಲ ತಹಶಿಲ್ದಾರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 80 ಲಕ್ಷ ಹಾಗೂ ದೇಶದಲ್ಲಿ 20 ಕೋಟಿಯಷ್ಟು ಹಿರಿಯ ನಾಗರಿಕರು ಇದ್ದಾರೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನೋಟಾಕ್ಕೆ ಮತ ಚಲಾಯಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.

ಕೋವಿಡ್ ಬಳಿಕ ರೈಲ್ವೆ ಪ್ರಯಾಣದಲ್ಲಿ ಹಿರಿಯ ನಾಗರಿಕರಿಗಿದ್ದ ರಿಯಾಯಿತಿಯನ್ನು ನಿಲ್ಲಿಸಲಾಗಿದೆ. ಸೇವಾ ಅವಧಿಯಲ್ಲಿ ಇಪಿಎಫ್ ವಂತಿಗೆ ಪಾವತಿಸಿದ ನೌಕರರು ನಿವೃತ್ತಿ ಬಳಿಕ 1ರಿಂದ 2 ಸಾವಿರ ರೂ. ಪಿಂಚಣಿ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ನೀಡುವ ಮಾಸಿಕ ವೃದ್ಧಾಪ್ಯ ವೇತನ ಶೇ. 10ರಷ್ಟು ಹಿರಿಯರಿಗೆ ಮಾತ್ರ ಸಿಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದ ಕಳೆದ 3 ತಿಂಗಳಿಂದ ಶೇ. 50ರಷ್ಟು ವೃದ್ಧಾಪ್ಯ ವೇತನ ಸಿಕ್ಕಿಲ್ಲ ಎಂದು ವಿವರಿಸಿದರು.

ಹಿರಿಯ ನಾಗರಿಕರಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ನೀಡಿದರೆ ಅರ್ಥಿಕ ಸಮಸ್ಯೆ ಉಂಟಾಗುವುದಿಲ್ಲ ಎಂದು ಅರ್ಥಕ್ರಾಂತಿ ಟ್ರಸ್ಟ್ ವರ್ಷದ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಕುರಿತು ಹಿರಿಯ ನಾಗರಿಕರ ಸಂಘಗಳೊಂದಿಗೆ ರ್ಚಚಿಸಲು ಕೇಂದ್ರ ಸರ್ಕಾರಕ್ಕೆ ಸಮಯವಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಆರ್.ಕೆ. ಮಠದ, ಸುನಂದಾ ಬೆನ್ನೂರ, ಎಂ.ಡಿ. ಪಾಟೀಲ ಇದ್ದರು.