ಮೈಸೂರು: ಸರ್ಕಾರಿ ಖರಾಬ್ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸಲಿ, ಬೇರೆ ಯಾರದೋ ದಾಖಲೆ ಸೃಷ್ಟಿಸಿ ಜಮೀನು ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸಮತಾ ಸೈನಿಕ ದಳದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಿತಿ ಮೀರಿದ್ದು, ಜನರು ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಅಲೆಯುವಂತಾಗಿದೆ. ತಾಲೂಕು ಕೇಂದ್ರಗಳಲ್ಲಿ ಜನರ ಯಾವುದೇ ಕೆಲಸ-ಕಾರ್ಯಗಳು ನಡೆಯುತ್ತಿಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಅಧಿಕಾರಿಗಳು ದಾಖಲೆಗಳನ್ನು ತಿರುಚಿ, ಶೋಷಿತರ ಸಮಸ್ಯೆಗಳನ್ನು ಸರಿಯಾಗಿ ಗ್ರಹಿಸದೆ ಹಣವಂತರೊಂದಿಗೆ ಸೇರಿ ಸ್ಥಳೀಯ ಅಧಿಕಾರಿಗಳ ಹಾಗೂ ಪೊಲೀಸರ ಮೂಲಕ ಸಾಗುವಳಿದಾರರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಸರ್ಕಾರಿ ಖರಾಬ್ ಜಾಗದಲ್ಲಿ 40 ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸಿ ನಕಲಿ ದಾಖಲೆಗಳ ಮೂಲಕ ಬೇರೆ ಯಾರನ್ನೋ ಜಮೀನುಗಳಲ್ಲಿ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಂಘಟನೆ ಜಿಲ್ಲಾಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷರಾದ ದೇವರಾಜು, ಮಂಜುನಾಥ್, ದೊಡ್ಡ ತಿಮ್ಮಯ್ಯ, ಕಾರ್ಯದರ್ಶಿ ಮರಿಸ್ವಾಮಿ, ಸಹ ಕಾರ್ಯದರ್ಶಿ ಚಲುವರಾಜು, ಖಜಾಂಚಿ ಇ.ಈರಭದ್ರ ಇತರರಿದ್ದರು.