ಹುಣಸೂರು ನಗರಸಭೆ ಕಚೇರಿ ಎದುರು ಸತ್ಯ ಎಂಎಎಸ್ ಫೌಂಡೇಶನ್ ವತಿಯಿಂದ ದುಪ್ಪಟ್ಟು ಕಂದಾಯ ವಸೂಲಾತಿ ಕ್ರಮವನ್ನು ರದ್ದುಗೊಳಿಸಲು ಆಗ್ರಹಿಸಿ ಅನಧಿಕೃತ ಬಡಾವಣೆಯ ನಿವಾಸಿಗಳು ಪ್ರತಿಭಟಿಸಿ, ಎಸಿ ಕಚೇರಿ ತಹಸೀಲ್ದಾರ್ ಯದುಗಿರೀಶ್‌ರಿಗೆ ಮನವಿಪತ್ರ ಸಲ್ಲಿಸಿದರು. ಸತ್ಯಪ್ಪ, ಚಂದ್ರಶೇಖರ್, ರಾಕೇಶ್ ರಾವ್, ಕೃಷ್ಣಕುಮಾರ್ ಇತರರಿದ್ದರು. 
ಜಿಲ್ಲೆ

ಅನಧಿಕೃತ ಬಡಾವಣೆ ನಿವಾಸಿಗಳ ಪ್ರತಿಭಟನೆ

ಲೋಕೇಶ್ ಮನು. ಡಿ

ಹುಣಸೂರು: ನಗರಸಭೆ ವತಿಯಿಂದ ದುಪ್ಪಟ್ಟು ಕಂದಾಯ ವಸೂಲಾತಿ ಕ್ರಮ ರದ್ದುಗೊಳಿಸಬೇಕು, ಬಿ ಖಾತಾ ಆಂದೋಲನಕ್ಕೆ ಅಂತಿಮ ಅವಧಿ ನಿಗದಿಗೊಳಿಸಬಾರದು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸತ್ಯ ಎಂಎಎಸ್ ಫೌಂಡೇಶನ್ ಮತ್ತು ಅನಧಿಕೃತ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ನಾಗರಿಕರು, ಜಿಲ್ಲಾಧಿಕಾರಿಗಳ ತಾರತಮ್ಯ ನೀತಿ ನಿಲ್ಲಲಿ, ದುಪ್ಪಟ್ಟು ಕಂದಾಯ ಬೇಡ. ಅನಧಿಕೃತ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ ಎಂಬ ಮುಂತಾದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ರಾಜ್ಯ ಸರ್ಕಾರ ಬಿ ಖಾತಾ ಅಂದೋಲನ ಆರಂಭಿಸುವ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಮತ್ತು ಮನೆಯ ಮಾಲೀಕತ್ವಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಸಮಾಧಾನ ತಂದಿರುವುದು ನಿಜ. ಆದರೆ ಕಂದಾಯ ವಸೂಲಾತಿಯಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ಅದರಲ್ಲೂ ಹುಣಸೂರು ನಗರಸಭೆಯಲ್ಲಿ ಕಳೆದ 6 ವರ್ಷಗಳ ಕಂದಾಯವನ್ನು ದುಪ್ಪಟ್ಟು ಕಟ್ಟಿಸಿಕೊಳ್ಳಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಲಿಖಿತ ಆದೇಶವನ್ನು ನಗರಸಭೆ ಅಧಿಕಾರಿಗಳು ನೀಡುತ್ತಿಲ್ಲ. ಬದಲಾಗಿ ಮೌಖಿಕವಾಗಿ ಆದೇಶ ನೀಡಿದ್ದಾರೆಂಬ ಸಬೂಬು ಹೇಳುತ್ತಿದ್ದಾರೆ. ಇದಲ್ಲದೆ ರಾಜ್ಯಾದ್ಯಂತ 2024-25ನೇ ಸಾಲಿಗಾಗಿ ಮಾತ್ರ ದುಪ್ಪಟ್ಟು ಕಂದಾಯ ಕಟ್ಟಿಸಿಕೊಳ್ಳಲಾಗುತ್ತಿದೆ? ಹುಣಸೂರಿನಲ್ಲಿ ಮಾತ್ರ ಹೀಗೇಕೆ? ಜಿಲ್ಲಾಧಿಕಾರಿ ಈ ಕೂಡಲೇ ಕಂದಾಯ ತಾರತಮ್ಯ ರದ್ದುಪಡಿಸಿ ಒಂದು ವರ್ಷದ ಅವಧಿಗೆ ಮಾತ್ರ ದುಪ್ಪಟ್ಟು ಕಂದಾಯ ವಸೂಲಾತಿ ಮಾಡಬೇಕು ಎಂದು ಆಗ್ರಹಿಸಿದರು.'

ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ವರದರಾಜು, ಹಂದನಹಳ್ಳಿ ಬಸಪ್ಪ, ರೈತ ಮುಖಂಡ ಕೃಷ್ಣಕುಮಾರ್, ವಿ.ಪಿ.ಸಾಯಿನಾಥ್, ಎಂ.ಕೃಷ್ಣೇಗೌಡ, ನಾಗಪ್ಪಶೆಟ್ಟಿ ತಾಲೂಕು ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿಗಳು, ಗೊಂದಳಿ ಸಮಾಜದ ಮುಖಂಡರಾದ ರಾಕೇಶ್ ರಾವ್, ಲೋಕೇಶ್ ರಾವ್, ರವಿ ಮಾರಿಗುಡಿ ಬೀದಿ, ಸವಿತಾ ಸಮಾಜದ ಮಾಜಿ ಅಧ್ಯಕ್ಷ ಹೈಟೆಕ್ ದೇವರಾಜು, ನಿವೃತ್ತ ಮುಖ್ಯಶಿಕ್ಷಕ ಲಿಂಗೇಗೌಡ, ಶಿವು ಡೆವಲಪರ್ಸ್, ಎಚ್.ಆರ್. ಸುಂದರ್, ಸುಬ್ರಮಣಿ ಸೇರಿದಂತೆ ಅನಧಿಕೃತ ಬಡಾವಣೆಗಳ ನಿವಾಸಿಗಳು ಹಾಜರಿದ್ದರು. ಉಪವಿಭಾಗಾಧಿಕಾರಿಗಳ ಕಚೇರಿ ತಹಸೀಲ್ದಾರ್ ಯದುಗಿರೀಶ್‌ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಹುಣಸೂರು ನಗರಸಭೆ ಕಚೇರಿ ಎದುರು ಸತ್ಯ ಎಂಎಎಸ್ ಫೌಂಡೇಶನ್ ವತಿಯಿಂದ ದುಪ್ಪಟ್ಟು ಕಂದಾಯ ವಸೂಲಾತಿ ಕ್ರಮವನ್ನು ರದ್ದುಗೊಳಿಸಲು ಆಗ್ರಹಿಸಿ ಅನಧಿಕೃತ ಬಡಾವಣೆಯ ನಿವಾಸಿಗಳು ಪ್ರತಿಭಟಿಸಿ, ಎಸಿ ಕಚೇರಿ ತಹಸೀಲ್ದಾರ್ ಯದುಗಿರೀಶ್‌ರಿಗೆ ಮನವಿಪತ್ರ ಸಲ್ಲಿಸಿದರು. ಸತ್ಯಪ್ಪ, ಚಂದ್ರಶೇಖರ್, ರಾಕೇಶ್ ರಾವ್, ಕೃಷ್ಣಕುಮಾರ್ ಇತರರಿದ್ದರು.

=============