ಮೈಸೂರು: ಶಿಷ್ಯವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕೆ.ಆರ್.ಆಸ್ಪತ್ರೆ ನಿವಾಸಿ ವೈದ್ಯರು (ರೆಸಿಡೆಂಟ್ ಡಾಕ್ಟರ್ಸ್) ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಧರಣಿ ನಡೆಸಿದ ವೈದ್ಯರು, ಶಿಷ್ಯವೇತನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಬೇಡಿಕೆ ಈಡೇರಿಸಬೇಕಾದ ಸರ್ಕಾರ ಮೌನ ವಹಿಸಿದೆ ಎಂದು ದೂರಿದರು.
ಸರ್ಕಾರದ ಈ ಕ್ರಮದಿಂದ ವೈದ್ಯರು ಆರ್ಥಿಕ, ವೃತ್ತಿಪರ, ವೈಯಕ್ತಿಕ ಒತ್ತಡಕ್ಕೆ ಸಿಲುಕಿದ್ದಾರೆ. ರೋಗಿಗಳ ಆರೈಕೆಯ ಮೇಲೂ ಪರಿಣಾಮ ಬೀರುತ್ತಿದೆ. ದಣಿವರಿಯದೆ 24 ರಿಂದ 48 ಗಂಟೆಗಳ ಕಾಲ ಕೆಲಸ ಮಾಡಿದರೂ ಅರ್ಹತೆಗಿಂತ ಕಡಿಮೆ ಶಿಷ್ಯವೇತನ ಪಡೆಯುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೂರು ವರ್ಷಕ್ಕೊಮ್ಮೆ ವೇತನ ಹೆಚ್ಚಳವಾಗುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ ಪ್ರತಿಭಟನೆ ಮಾಡದ ಹೊರತು ವೇತನ ಹೆಚ್ಚಳ ಮಾಡುವುದಿಲ್ಲ ಎಂದು ಕಿಡಿ ಕಾರಿದರು.
ಕಳೆದ ನಾಲ್ಕು ವರ್ಷಗಳಿಂದ ಶಿಷ್ಯವೇತನ ಹೆಚ್ಚಳ ಮಾಡಿಲ್ಲ. ಹೀಗಾಗಿ ಇತರ ರಾಜ್ಯಗಳಿಗೆ ಸಮಾನವಾಗಿ ಶಿಷ್ಯವೇತನ ಹೆಚ್ಚಳ ಮಾಡಬೇಕು. ರಾಜ್ಯಾದ್ಯಂತ ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿವಾಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಹೌಸ್ ಸರ್ಜನ್, ಸ್ನಾತಕೋತ್ತರ ವಿದ್ಯಾರ್ಥಿಗಳು, ಸೂಪರ್ ಸ್ಪೆಷಾಲಿಟಿ ವಿದ್ಯಾರ್ಥಿಗಳನ್ನು ಒಳಗೊಂಡಿರುವ ಎಲ್ಲ ತುರ್ತು ಅಲ್ಲದ ಸೇವೆಗಳನ್ನು ನಮ್ಮ ಬೇಡಿಕೆ ಈಡೇರುವವರೆಗೆ ಸ್ಥಗಿತಗೊಳಿಸಲಾಗುತ್ತದೆ. ಸರ್ಕಾರ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ನಿವಾಸಿ ವೈದ್ಯರ ಸಂಘದ ಅಧ್ಯಕ್ಷ ಡಾ.ಸಿರೀಶ್ ಶಿವರಾಮಯ್ಯ, ಉಪಾಧ್ಯಕ್ಷ ಹೇಮಂತ್ ರೆಡ್ಡಿ, ಡಾ.ಅಂಬರೀಶ್, ಡಾ.ವೇಣುಗೋಪಾಲ್ ಇತರರು ಇದ್ದರು.