ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ಕೂಲಿ ಪೋರ್ಟರ್ಸ್ ಸಂದ ನೇತೃತ್ವದಲ್ಲಿ ರೈಲ್ವೆ ಕೂಲಿಕಾರರು ಇಲ್ಲಿನ ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನೈಋತ್ಯ ರೈಲ್ವೆ ವಲಯದಲ್ಲಿ ಕೂಲಿ ಮೇ ಆ್ಯಪ್ ಅನ್ನು ಖಾಸಗಿ ಸಂಸ್ಥೆಯವರು ನಿರ್ವಹಿಸುತ್ತಿದ್ದು, ಇದನ್ನು ತಕ್ಷಣ ಸ್ಥಗಿತಗೊಳಿಸಬೇಕು. ಕೂಲಿ ಆಳುಗಳಿಗೆ ರೈಲ್ವೆಯಲ್ಲಿ ಕಾಯಂ ಉದ್ಯೋಗ ನೀಡಬೇಕು. ಬ್ಯಾಟರಿ ಆಟೋಗಳಲ್ಲಿ ಕೇವಲ ಹಿರಿಯ ನಾಗರಿಕರು, ಅನಾರೋಗ್ಯಕ್ಕೆ ಈಡಾದವರು ಹಾಗೂ ಅಂಗವಿಕಲರನ್ನು ಮಾತ್ರ ಸಾಗಿಸಬೇಕು. ಈ ಆಟೋಗಳಲ್ಲಿ ಸರಕು ಸಾಗಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈಲ್ವೆ ಸಚಿವರಿಗೆ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಸಂದ ಅಧ್ಯಕ್ಷ ಮೊಹ್ಮದ್ಅಲಿ ನದಾ, ಚಂದ್ರು ಚಲವಾದಿ, ಜಾರಖಾನ ಜಮಖಾನೆವಾಲೆ ಹಾಗೂ ಇನ್ನಿತರರು ಹಾಜರಿದ್ದರು.