ಜಿಲ್ಲೆ

ಪ್ರಾಂತ ಕೃಷಿ ಕೂಲಿಕಾರರ ಸಂಘದ ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಕೆ.ಎನ್.ರಾಘವೇಂದ್ರ

ಮಂಡ್ಯ: ಉದ್ಯೋಗ ಖಾತ್ರಿಯಡಿ ಕೆಲಸ ನೀಡುವುದು, ನಿರುದ್ಯೋಗ ಭತ್ಯೆ ಹಾಗೂ ಸ್ಮಶಾನ ಒತ್ತುವರಿ ತೆರವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್‌ಎಂ.ವಿ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು, ನಂತರ ಜಿಲ್ಲಾ ಪಂಚಾಯಿತಿ ಕಚೇರಿವರೆಗೂ ಮೆರವಣಿಗೆ ನಡೆಸಿ ಘೋಷಣೆ ಕೂಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಮಳವಳ್ಳಿ, ಕೆ.ಆರ್.ಪೇಟೆ, ಮದ್ದೂರು ತಾಲೂಕಿನಲ್ಲಿ ಕನಿಷ್ಟ ಒಂದೂವರೆ ತಿಂಗಳಾದರೂ ಕೆಲಸ ನೀಡಬೇಕು. ಬಾಕಿ ಉಳಿಸಿಕೊಂಡಿರುವ ಕೂಲಿಯನ್ನು ಬಿಡುಗಡೆ ಮಾಡಬೇಕು. ಕಾಯಕ ಬಂಧುಗಳಿಗೆ ಗುರುತಿನ ಚೀಟಿ ನೀಡಿ ಕೆಲಸದ ಸ್ಥಳಕ್ಕೆ ಬೇಕಾಗಿರುವ ಟೇಪು, ಬ್ಯಾಗ್, ಮೊಬೈಲ್ ಮತ್ತು ಕೆಲಸ ನಿರ್ವಹಿಸುವ ಕೂಲಿಕಾರರ ಕೈಗಳಿಗೆ ಗ್ಲೌಸ್, ಶೂ, ಸಾಕ್ಸ್ ನೀಡಿ ಕೆಲಸದಲ್ಲಿ ಸ್ಥಳದಲ್ಲಿ ಆಗುವ ಅನಾಹುತ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಪಿಡಿಒ ಮತ್ತು ಇತರೆ ಪ್ರಮುಖ ಸಿಬ್ಬಂದಿಯು ಕೇಂದ್ರ ಸ್ಥಾನದಲ್ಲಿಯೇ ವಾಸಿಸಬೇಕೆಂದು ಆದೇಶವಿದ್ದರೂ ವಾಸ ಮಾಡುತ್ತಿಲ್ಲ. ಒಂದೇ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸಿ ಮೂರು ವರ್ಷ ತುಂಬಿರುವ ಪಿಡಿಒಗಳನ್ನು ಮುಂದುವರಿಸಬಾರದೆಂಬ ಆದೇಶವಿದ್ದರೂ ಹತ್ತು ವರ್ಷಗಳಾದರೂ ಒಂದೇ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತುರ್ತಾಗಿ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.

ಕಡಿತ ಮಾಡಿರುವ ಸಲಕರಣೆ ವೆಚ್ಚವನ್ನು ಪುನರ್‌ಪ್ರಾರಂಭಿಸಬೇಕು. ಇಲ್ಲವಾದರೆ ಸಲಕರಣೆಗಳನ್ನು ಪಂಚಾಯಿತಿಗಳಿಂದಲೇ ಸರಬರಾಜು ಮಾಡಬೇಕು. ನಾಮಫಲಕ ಹಾಕಿರುವ ಸ್ಥಳದಲ್ಲಿ ಫೋಟೋ ತೆಗೆಯುವುದನ್ನು ಕೈಬಿಟ್ಟು ಕಾಮಗಾರಿ ನಿರ್ವಹಿಸುವ ಸ್ಥಳದಲ್ಲಿ ಫೋಟೋ ತೆಗೆಯಬೇಕು. ನಾಮಫಲಕವನ್ನು ಪಂಚಾಯಿತಿಯಿಂದಲೇ ಹಾಕಬೇಕು. ಕಾಯಕಬಂಧುಗಳಿಂದ ಅಳವಡಿಸಿರುವ ನಾಮಫಲಕದ ವೆಚ್ಚವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೂಸಿನ ಮನೆಯ ಅದರ ಮಹತ್ವವನ್ನು ಕಳೆದುಕೊಂಡಿದ್ದು ಮಕ್ಕಳು ಹಾಜರಾಗದೇ ಕೂಲಿ ಪಾವತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಜಿಲ್ಲಾದ್ಯಂತ ತನಿಖೆಗೆ ಒಳಪಡಿಸಬೇಕು. ತಾಂತ್ರಿಕಗೊಂಡ ಹಾಜರಾತಿಗೆ ಸೀಮಿತಗೊಂಡಿರುವ ರೋಜ್‌ಗಾರ್ ದಿವಸವನ್ನು ಸಮರ್ಪಕಗೊಳಿಸಬೇಕು. ಉದ್ಯೋಗ ಖಾತ್ರಿ ಕೆಲಸದಲ್ಲಿ ಯಂತ್ರದ ಹಾವಳಿಯನ್ನು ತಪ್ಪಿಸಿ ಬಲಾಢ್ಯರ ಮಧ್ಯ ಪ್ರವೇಶಕ್ಕೆ ಅವಕಾಸ ನೀಡದೇ ಕೂಲಿಕಾರರಿಗೆ ಸಮರ್ಪಕವಾಗಿ ಕೆಲಸ ನೀಡಬೇಕು ಎಂದು ಆಗ್ರಹ ಪಡಿಸಿದರು.

ಜಿಲ್ಲೆಯಲ್ಲಿ 30 ವರ್ಷಗಳಿಂದ ಬಡವರಿಗೆ ನಿವೇಶನ ನೀಡಿಲ್ಲ, ಪಂಚಾಯಿತಿಗೆ ಅರ್ಜಿ ಕೊಡುತ್ತಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ. ನೂರಾರು ಗ್ರಾಮಗಳಲ್ಲಿ ಸ್ಮಶಾನವಿಲ್ಲ. ಇರುವ ಸ್ಮಶಾನ ಸ್ಥಳವನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಶವಸಂಸ್ಕಾರಕ್ಕೆ ಅಡ್ಡಿಯಾಗಿದ್ದು, ಕೂಡಲೇ ಸ್ಮಶಾನ ಸ್ಥಳ ಒತ್ತುವರಿ ತೆರವಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾಧ್ಯಕ್ಷ ಶಿವಮಲ್ಲಯ್ಯ, ಮುಖಂಡರಾದ ಬಿ.ಹನುಮೇಶ್, ಅಮಾಸಯ್ಯ, ಟಿ.ಪಿ.ಅರುಣ್‌ಕುಮಾರ್, ಜಿ.ಎಚ್.ಗಿರೀಶ್, ಲಕ್ಷ್ಮೀ ಗೊಲ್ಲರಹಳ್ಳಿ, ಟಿ.ಎಚ್.ಆನಂದ್, ಲಕ್ಷ್ಮೀ ಕುಂತೂರು, ಅಬ್ದುಲ್ಲಾ, ಸರೋಜಮ್ಮ, ಬಸವರಾಜು, ಗೋಪಾಲ್, ಸುರೇಂದ್ರ ಇತರರಿದ್ದರು.