ಜಿಲ್ಲೆ

ಹಿಂದು ಪರ ಸಂಘಟನೆಗಳಿಂದ ಪ್ರತಿಭಟನೆ

Kodagu

ಮಡಿಕೇರಿ: ಲಡಾಕ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಭವಿಸಿದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, ಚೀನಾ ಕೃತ್ಯ ಖಂಡಿಸಿ ಮಡಿಕೇರಿಯಲ್ಲಿ ಹಿಂದು ಪರ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಜಮಾಯಿಸಿದ ವಿಶ್ವ ಹಿಂದು ಪರಿಷತ್, ಬಜರಂಗಳ ಹಾಗೂ ಬಿಜೆಪಿಯ ಜಿಲ್ಲಾ ಪ್ರಮುಖರು ’ಮೇಡ್ ಇನ್ ಚೀನಾ’ ಉತ್ಪನ್ನಗಳಿಗೆ ಬೆಂಕಿ ಇಟ್ಟು, ಚೀನಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಭಾರತದ ವಿರುದ್ಧ ಚೀನಾ ಕಾಲು ಕೆರೆದು ಯುದ್ಧಕ್ಕೆ ನಿಂತಿದೆ. ಚೀನಾದ ಹೀನಾಯ ಕೃತ್ಯಕ್ಕೆ ಪ್ರತ್ಯುತ್ತರ ನೀಡಬೇಕಾದ ಅನಿವಾರ್ಯತೆ ಭಾರತಕ್ಕಿದೆ. ಸಮರ್ಥ ನಾಯಕನ ಕೈಯಲ್ಲಿ ದೇಶದ ಆಡಳಿತ ವ್ಯವಸ್ಥೆಯಿದ್ದು, ಭಾರತೀಯರೆಲ್ಲರೂ ಪ್ರಧಾನಿ ಮೋದಿಯ ಸಂಕಲ್ಪಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದರು.

ಜಿಲ್ಲಾ ಮಠ-ಮಂದಿರ ಪ್ರಮುಖರಾದ ಚಿ.ನಾ.ಸೋಮೇಶ್ ಮಾತನಾಡಿ, ನಮ್ಮ ಸೈನಿಕರು ಭ್ರಷ್ಟರ ಹೆಡೆಮುರಿ ಕಟ್ಟಿದ್ದಾರೆ. ಉಗ್ರರ ಹುಟ್ಟಡಗಿಸುವವರೆಗೆ ಈ ಹೋರಾಟದಿಂದ ನಾವು ಹಿಂದೆ ಸರಿಯುವುದಿಲ್ಲ. ಅಲ್ಲಿಯವರೆಗೆ ಯಾರಿಗೂ ವಿರಾಮವಿಲ್ಲ. ಆ ಸಂದೇಶದೊಂದಿಗೆ ನಾವೆಲ್ಲರೂ ಮುನ್ನಡೆಯಬೇಕಿದೆ ಎಂದರು.

ಬಜರಂಗದದ ಜಿಲ್ಲಾ ಸಂಯೋಜಕ ಚೇತನ್, ವಿದ್ಯಾರ್ಥಿ ಪ್ರಮುಖ್ ವಿನಯ್, ಹಿಂದು ಜಾಗರಣ ವೇದಿಕೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಕ್ಕೇರ, ವಿವಿಧ ಹಿಂದುಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.