ಹನೂರು: ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವರನ್ನು ಅಮಾನತು ಪಡಿಸುವುದರ ಜತೆಗೆ ಗಡಿಪಾರು ಮಾಡುವಂತೆ ಆಗ್ರಹಿಸಿ ಶನಿವಾರ ರಾಮಾಪುರದಲ್ಲಿ ದಲಿತಪರ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಗ್ರಾಮದ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಜಮಾಯಿಸಿದ್ದ ದಲಿತಪರ ಸಂಘಟನೆಯ ನೂರಾರು ಜನರು ಅಮಿತ್ ಷಾ ಅವರ ವಿರುದ್ಧ ಘೋಷಣೆಗಳನ್ನು ಕೂಗಿ, ಅವರ ಪ್ರತಿಕೃತಿ ದಹನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಕಾರರು ಮಾತನಾಡಿ, ಸಮಾನತೆಯನ್ನು ತರುವ ನಿಟ್ಟಿನಲ್ಲಿ ದೇಶಕ್ಕೆ ಸಂವಿಧಾನವನ್ನು ಕೊಡುಗೆ ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಎಲ್ಲರೂ ಗೌರವಿಸುತ್ತಾರೆ. ಸಂವಿಧಾನದ ಅಡಿಯಲ್ಲೇ ಸರ್ಕಾರ ಆಡಳಿತ ನಡೆಸುತ್ತಿದೆ. ಹೀಗಿರುವಾಗ ಅಮಿತ್ ಷಾ ಅವರು ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ನಿಜಕ್ಕೂ ಖಂಡನೀಯ. ಇದು ದೇಶಕ್ಕಾದ ಅವಮಾನ. ಆದ್ದರಿಂದ ಸಂವಿಧಾನದ ಅಡಿಯಲ್ಲೇ ಗೃಹ ಮಂತ್ರಿ ಹುದ್ದೆಯನ್ನು ಅಲಂಕರಿಸುವ ಇವರನ್ನು ಸಂಪುಟದಿಂದ ಅಮಾನತು ಪಡಿಸಬೇಕು. ಜತೆಗೆ ಗಡಿಪಾರು ಮಾಡಲು ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಬಳಿಕ ಗ್ರಾಮ ಪಂಚಾಯಿತಿಗೆ ತೆರಳಿದ ಪ್ರತಿಭಟನಾಕಾರರು ತಹಸೀಲ್ದಾರ್ ಅವರಿಗೆ ಕಾರ್ಯದರ್ಶಿ ಕೋಕಿಲಾ ಅವರ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ದೊರೆಸ್ವಾಮಿ, ತಾಲೂಕು ಸಂಚಾಲಕ ಗಣೇಶ್, ರಾಮಾಪುರ ಡಾ.ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಸುಂದ್ರೇಶ್, ಮುಖಂಡ ಬುದ್ಧ, ಗುರುದೇವ, ಮುತ್ತುಮಾದನ್ ಇತರರು ಇದ್ದರು.