ಮೈಸೂರು: ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಪಿಎಸ್-95 ಪಿಂಚಣಿದಾರರ ಒಕ್ಕೂಟದಿಂದ ಶನಿವಾರ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರವು ಕಾರ್ಮಿಕರಿಗಾಗಿ 1995ರಲ್ಲಿ ಇಪಿಎಸ್-95 ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಅಂದು 50, 100, 200 ಮತ್ತು 500 ರೂ.ಹೀಗೆ… ಇದ್ದ ಪಿಂಚಣಿಯನ್ನು 2014ರಲ್ಲಿ ಕನಿಷ್ಠ ಒಂದು ಸಾವಿರ ರೂ.ಗೆ ಏರಿಕೆ ಮಾಡಿದೆ. ಇಂದಿನ ಬೆಲೆ ಏರಿಕೆಯಲ್ಲಿ ಈ ಪಿಂಚಣಿ ಮೊತ್ತವು ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಆರೋಪಿಸಿದರು.
ಬೆಲೆ ಏರಿಕೆಗೆ ತಕ್ಕಂತೆ ತುಟ್ಟಿಭತ್ಯೆಯನ್ನು ಹೆಚ್ಚಿಸಬೇಕು. ಪಿಂಚಣಿದಾರರ ಹಿರಿಯ ನಾಗರಿಕರು ಆರೋಗ್ಯವಾಗಿರಲು ಔಷಧ, ಮಾತ್ರೆ ಮತ್ತಿತರ ಖರ್ಚಿಗಾಗಿ ಭತ್ಯೆಯನ್ನು ನೀಡಬೇಕು. ಪಿಂಚಣಿದಾರರು ಬದುಕುಳಿಯಲು ಕನಿಷ್ಠ 9 ಸಾವಿರ ರೂ.ಗಳನ್ನು ಪಿಂಚಣಿಯಾಗಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಪಿಂಚಣಿ ಹೆಚ್ಚಳಕ್ಕೆ ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಕೇಂದ್ರ ಸರ್ಕಾರ ಇಪಿಎಸ್-95 ನಿವೃತ್ತಿದಾರರ ಬಗ್ಗೆ ಗಮನಹರಿಸದೆ ನಿರ್ಲಕ್ಷೃ ತೋರುತ್ತಿದೆ ಎಂದು ದೂರಿದರು. ಮುಖಂಡ ಜಿ.ಜಯರಾಮ ಸೇರಿದಂತೆ ಇತರರಿದ್ದರು.