ಅರಸೀಕೆರೆ: ಕಾನೂನಿನ ಅಸ್ತ್ರ ಬಳಸಿ ಜೆಡಿಎಸ್, ಬಿಜೆಪಿ ಕಾರ್ಯಕರ್ತರನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಬೆದರಿಸಲು ಹೊರಟಿದ್ದಾರೆ ಎಂದು ಆರೋಪಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದ ಎನ್‌ಡಿಎ ಮುಖಂಡರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದು ಸಂಜೆ ಬಿಡುಗಡೆಗೊಳಿಸಿದರು.
ಅದಕ್ಕೂ ಮುನ್ನ ಪ್ರತಿಭಟನೆಯಲ್ಲಿ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ವಿರೋಧ ಪಕ್ಷದವರನ್ನು ಹತ್ತಿಕ್ಕುವ ಮೂಲಕ ಎಲ್ಲರನ್ನೂ ಮುಗಿಸಲು ಹೊರಟಿದ್ದಾರೆ. ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಯ್ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ದಾಖಲಿಸಿ ಬಂಧಿಸುವ ಹುನ್ನಾರ ನಡೆಸಿರುವುದು ಅಕ್ಷಮ್ಯ. ಅನ್ಯ ಪಕ್ಷದ ಮುಖಂಡರು ರಾಜಕೀಯ ಮಾಡದಂತೆ ತಡೆಯಲು ಪೊಲೀಸರನ್ನು ಬಳಕೆ ಮಾಡಲಾಗಿದೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕೇಳಬಾರದು ಎಂದರೆ ಹೇಗೆ?. ಕಾಂಗ್ರೆಸ್ ಮುಖಂಡರು ನೀಡುವ ದೂರು ಸ್ವೀಕರಿಸಿ ಜೆಡಿಎಸ್‌ನವರು ನೀಡಿದ ದೂರನ್ನು ಪರಿಗಣಿಸಿಲ್ಲ. ಇಂತಹ ಇಬ್ಬಗೆ ನೀತಿ ಖಂಡಿಸಿ ನ್ಯಾಯಯುತ ಹೋರಾಟಕ್ಕೆ ಮುಂದಾಗಿದ್ದೇವೆ. ಇದನ್ನು ಸಹಿಸದೆ ಹೋರಾಟ ತಡೆಯಲು ಆರಕ್ಷಕ ಇಲಾಖೆ ಬಳಕೆ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಗೀಜಿಹಳ್ಳಿ ಮಲ್ಲಿಕಾರ್ಜುನ ಮಾತನಾಡಿ, ನಮ್ಮನ್ನು ಬಂಧಿಸಿ, ಅನ್ಯಾಯ ಪ್ರಶ್ನಿಸಿದರೆ ಬೆದರಿಕೆ ಹಾಕುತ್ತೀರಿ. ಜೀವ ಹೋದರೂ ಹೆದರುವ ಮಾತಿಲ್ಲ ಎಂದು ಕಿಡಿಕಾರಿದರು.
ಗ್ರಾಮ ಪಂಚಾಯಿತಿ ಸದಸ್ಯ ಭೈರಗೊಂಡಪಹಳ್ಳಿ ಉಮೇಶ್ ಮಾತನಾಡಿ, ಭೋವಿ ಸಮಾಜವನ್ನು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ವ್ಯಾಪಾರಿ ವಿರುದ್ಧ ಇದೂವರೆಗೂ ಪ್ರಕರಣ ದಾಖಲಿಸಿಲ್ಲ. ಆದರೆ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಬಂಧಿಸಿ ಜೈಲಿಗೆ ಕಳುಹಿಸುವ ಷಡ್ಯಂತ್ರ ನಡೆದಿದೆ. ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಸಂವಿಧಾನ ದುರ್ಬಳಕೆ ಮಾಡಲಾಗುತ್ತಿದೆ. ಪೊಲೀಸರು ಏಕಪಕ್ಷೀಯ ನಡೆ ವಿರೋಧಿಸಿ ಹೋರಾಟ ನಡೆಸುತ್ತಿದ್ದೇವೆ. ನ್ಯಾಯ ದೊರೆಯದಿದ್ದರೆ ಉಗ್ರ ಪ್ರತಿಭಟನೆ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪೊಲೀಸರು ಶಾಮಿಯಾನ, ಭಾವಚಿತ್ರ ತೆರವುಗೊಳಿಸಲು ಮುಂದಾದರು. ಈ ವೇಳೆ ಜೆಡಿಎಸ್ ಮುಖಂಡರು ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಎರಡು ವಾಹನಗಳಲ್ಲಿ 30ಕ್ಕೂ ಹೆಚ್ಚಿನ ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಜಾವಗಲ್ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಸಂಜೆ ಬಿಡುಗಡೆ ಮಾಡಿದರು.
ಪ್ರತಿಭಟನಾಕಾರರ ಬಂಧನದ ವಿಷಯ ತಿಳಿದ ಬೆಂಬಲಿಗರು, ಮುಖಂಡರು, ಪಕ್ಷದ ಕಾರ್ಯಕರ್ತರು ಜಾವಗಲ್ ಠಾಣೆ ಬಳಿ ಜಮಾಯಿಸಿದ್ದರು. ಡಿವೈಎಸ್ಪಿ ಗೋಪಿ, ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್‌ಕುಮಾರ್ ಅವರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.