ಮೈಸೂರು: ನಗರದ ಪಾರಂಪರಿಕ ದೇವರಾಜ ಮಾರುಕಟ್ಟೆ ಮತ್ತು ಲಾನ್ಸ್‌ಡೌನ್ ಕಟ್ಟಡಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಮೈಸೂರು ಗ್ರಾಹಕರ ಪರಿಷತ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿಯ ಪಾರ್ಕ್‌ನಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ‘ಉಳಿಸಿ ಉಳಿಸಿ ಪರಂಪರೆ ಉಳಿಸಿ’, ‘ಚಾಮರಾಜ ಒಡೆಯರ್ ಕಟ್ಟಿಸಿದ ಕಟ್ಟಡಗಳನ್ನು ಉಳಿಸಿ’, ‘ಮೈಸೂರು ಪರಂಪರೆ ಕಾಪಾಡಿ’, ‘ನಮ್ಮ ಮಾರುಕಟ್ಟೆ ನಮ್ಮ ಹೆಮ್ಮೆ’... ಹೀಗೆ ನಾನಾ ಘೋಷಣೆಯ ಫಲಕಗಳನ್ನು ಪ್ರದರ್ಶಿಸುವ ಮೂಲಕ ನಗರದ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ರಾಜ್ಯ ಸರ್ಕಾರ ಶೀಘ್ರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮೈಸೂರು ಸಾಂಸ್ಕೃತಿಕ ನಗರಿಯೂ ಹೌದು, ಪಾರಂಪರಿಕ ನಗರಿಯೂ ಹೌದು. ಇಲ್ಲಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಆಗಬೇಕು. 135 ವರ್ಷಗಳಷ್ಟು ಹಳೆಯ ದೇವರಾಜ ಮಾರುಕಟ್ಟೆ ಮತ್ತು ಇದಕ್ಕಿಂತಲೂ ಹಳೆಯದಾದ ಲಾನ್ಸ್‌ಡೌನ್ ಕಟ್ಟಡ ಬಹಳ ದುಸ್ಥಿತಿಯಲ್ಲಿವೆ. ದೊಡ್ಡಗಡಿಯಾರವನ್ನು ದುರಸ್ತಿ ಮಾಡುವಂತೆ ಹೋರಾಟ ಮಾಡಲಾಗಿತ್ತು. ಪಾಲಿಕೆ ಇದರ ದುರಸ್ತಿ ಕೆಲಸವನ್ನು ಪುರಾತತ್ವ ಇಲಾಖೆಗೆ ನೀಡಿದೆ. ಇದೇ ರೀತಿ ಈ ಎರಡೂ ಕಟ್ಟಡಗಳನ್ನು ಸಂರಕ್ಷಣೆ ಮಾಡಿದರೆ ಉದ್ದೇಶ ಈಡೇರುತ್ತದೆ. ಆದರೆ, ಎಲ್ಲವನ್ನೂ ನಿರ್ಲಕ್ಷೃ ಮಾಡಿದರೆ ಮೈಸೂರು ಪಾರಂಪರಿಕ ನಗರ ಎಂಬ ಹೆಸರು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪಾರಂಪರಿಕ ಕಟ್ಟಡಗಳನ್ನು ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪಾರಂಪರಿಕ ತಜ್ಞರ ಸಮಿತಿ ಸದಸ್ಯ ಪ್ರೊ.ಎನ್.ರಂಗರಾಜು ಮಾತನಾಡಿ, ಮೈಸೂರಿಗೆ ರಾಜರು ನೀಡಿರುವ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ. 1799 ರಿಂದ 1948ರವರೆಗೂ ರಾಜರು ನೀಡಿರುವ ಕೊಡುಗೆಗಳು ಪಾರಂಪರಿಕವಾಗಿವೆ. ಸುಮಾರು 14 ಅರಮನೆಗಳು, 25 ವಸ್ತುಸಂಗ್ರಹಾಲಯಗಳು, 600ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳು ಇವೆ. ಇದರಲ್ಲಿ 131 ಪಾರಂಪರಿಕ ಕಟ್ಟಡಗಳನ್ನು ಸರ್ಕಾರ ಘೋಷಣೆ ಮಾಡಿದೆ. ಅದರಲ್ಲಿ ದೇವರಾಜ ಮಾರುಕಟ್ಟೆ ಮತ್ತು ಲಾನ್ಸ್ ಡೌನ್ ಕಟ್ಟಡ ಸೇರಿದಂತೆ ಕೆಲವು ಕಟ್ಟಡಗಳು ಎ ಗ್ರೇಡ್ ಆಗಿವೆ. ಈಗಾಗಲೇ 110 ಪಾರಂಪರಿಕ ಕಟ್ಟಡಗಳ ಸರ್ವೇ ಆಗಿದೆ. ಇವುಗಳ ಸಂರಕ್ಷಣೆಗೆ ಸರ್ಕಾರ ಹಣ ನೀಡಬೇಕು. ಸರ್ಕಾರ ಬಿಡುಗಡೆ ಮಾಡದಿದ್ದರೆ, ಹೆರಿಟೇಜ್ ರೆಗ್ಯುಲೇಷನ್2020 ಅಮೆಂಡ್‌ಮೆಂಟ್‌ನಲ್ಲಿ ಸರ್ಕಾರದಲ್ಲಿ ಇವುಗಳ ಸಂರಕ್ಷಣೆಗೆ ಹಣವಿಲ್ಲದಿದ್ದರೆ, ಬೇರೆ ಯಾರಾದರೂ ಸಂರಕ್ಷಣೆ ಮತ್ತು ನಿರ್ವಹಣೆ ಮಾಡಲು ಆಸಕ್ತಿ ಇರುವವರಿಂದ ಈ ಕೆಲಸ ಮಾಡಲು ಅವಕಾಶ ನೀಡಬಹುದು ಎಂದು ಹೇಳಲಾಗಿದೆ. ಇಂತಹ ಅನುಕೂಲಗಳನ್ನಾದರೂ ಬಳಸಿಕೊಂಡು ದೇವರಾಜ ಮಾರುಕಟ್ಟೆ ಮತ್ತು ಲಾನ್ಸ್‌ಡೌನ್ ಕಟ್ಟಡ ಸೇರಿದಂತೆ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಎಸ್.ಮಹದೇವ, ಮೇಜರ್ ಜನರಲ್ ಸುಧೀರ್ ಒಂಬತ್ಕೆರೆ, ಮುಖಂಡರಾದ ಶ್ರೀರಾಮ್, ಪ್ರೊ.ಅರುಣ್ ಮೆನನ್, ಜಿ.ಶ್ರೀಧರ್, ವೆಂಕಟೇಶ್ವರ್ ರಾವ್, ಕೆ.ಪ್ರೇಮಕುಮಾರ್, ಅಮರನಾಥ್, ಮನೀಷ್ ಕುಮಾರ್ ಇತರರಿದ್ದರು.