ವಿಜಯಪುರ: ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಕರ್ತವ್ಯನಿರತ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಹತ್ಯೆಯನ್ನು ಖಂಡಿಸಿ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ನೇತೃತ್ವದಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಜಾಥಾ ನಡೆಸಿದ ನೂರಾರು ವೈದ್ಯರು, ಗಾಂಧಿ, ಬಸವೇಶ್ವರ ವೃತ್ತದ ಮೂಲಕ ಸಂಚರಿಸಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮೀಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಟಿ. ಭೂಬಾಲನ್‌ಗೆ ಮನವಿ ಸಲ್ಲಿಸಿದರು.
ಬಿಎಲ್‌ಡಿಇ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸಂಜೀವಕುಮಾರ ಬೆಂಟೂರ ಮಾತನಾಡಿ, ಕೊಲ್ಕತ್ತದಲ್ಲಿ ನಡೆದ ಯುವ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಹೀನ ಕೃತ್ಯವಾಗಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ದೇಶದಲ್ಲಿ ಸರ್ಕಾರಗಳು ಮಹಿಳಾ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೇ, ಭವಿಷ್ಯದಲ್ಲಿ ಇಂಥ ಘಟನೆ ತಡೆಗಟ್ಟಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಮಹಿಳೆಯರ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸಬೇಕು ಎಂದರು.
ಡಾ.ತೇಜಶ್ವಿನಿ ವಲ್ಲಭ ಮಾತನಾಡಿ, ಇದೊಂದು ಅಮಾನವೀಯ ಕೃತ್ಯ. ಇಂಥ ವಾತಾವರಣದಲ್ಲಿ ಮಹಿಳಾ ವೈದ್ಯರಿಗೆ ರಾತ್ರಿ ವೇಳೆ ಕೆಲಸ ಮಾಡಲು ಆದೇಶ ಮಾಡುವುದು ನನ್ನಂತ ಹಿರಿಯ ವೈದ್ಯೆಗೆ ಸವಾಲಾಗಿದೆ. ಇಂಥ ಭಯದ ವಾತಾವರಣದಲ್ಲಿ ಮಹಿಳಾ ವೈದ್ಯರು ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿಗೆ ಗಮನ ಹರಿಸಿದರೆ ರೋಗಿಗಳ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಕಡಿಮೆಯಾಗುವ ಆತಂಕವಿದೆ. ಆದ್ದರಿಂದ ಸರ್ಕಾರಗಳು ಮಹಿಳಾ ವೈದ್ಯರಿಗೆ ಸುಸೂತ್ರವಾಗಿ ಕೆಲಸ ನಿರ್ವಹಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಭಾರತಿಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ರವಿ ಬಿರಾದಾರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು 77 ವರ್ಷ ಕಳೆದರೂ ರಾಷ್ಟ್ರಪಿತ ಮಹಾತ್ಮ್ಮ ಗಾಂಧಿಯವರ ಕನಸಿನ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ. ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು, ಭ್ರೂಣಹತ್ಯೆಯಿಂದ ಪ್ರಾರಂಭವಾಗಿ ಎಲ್ಲ ವಯೋಮಾನದ ಮಹಿಳೆಯರ ಮೇಲೂ ಆಗಾಗ ನಡೆಯುತ್ತಿರುತ್ತವೆ. 12ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು ಮಹಿಳೆಯರಿಗೆ ಸಮಾನ ಹಕ್ಕು ಕಲ್ಪಿಸಿದ್ದಾರೆ. ಆದರೆ, ನಮ್ಮ ಸರ್ಕಾರಗಳು ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿ ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಕಠಿಣ ಕಾನೂನುಗಳನ್ನು ಕಾರಿಗೆ ತಂದು ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಲು ಮುಂದಾಗಬೇಕು ಎಂದರು.
ಜಿಲಾನಿ ಅವಟಿ, ಡಾ. ರಾಜೇಶ ಹೊನ್ನುಟಗಿ, ಡಾ. ದಯಾನಂದ ಬಿರಾದಾರ, ಡಾ. ಸುರೇಶ ಕಾಗಲಕರ ಕೊಲ್ಕತ್ತ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಡಾ. ನಳಿನಿ ಬಾಗಲಕೋಟಕರ, ಡಾ. ಸುರೇಖಾ ಹಿಪ್ಪರಗಿ, ಡಾ. ರೇಖಾ ಹಿಪ್ಪರಗಿ, ಡಾ. ಜಯಶ್ರೀ ಸಜ್ಜನರ, ಡಾ. ರಾಜಶ್ರೀ ಅಕ್ಕಿ, ಡಾ. ಸುಮೆದಾ ಕಟ್ಟಿ, ಡಾ. ಮಾಧುರಿ ಪಾಟೀಲ, ಡಾ. ಜ್ಯೋತಿ ಕೊರಬು, ಡಾ. ಪ್ರಿಯಾಂಕಾ, ಡಾ. ಗೌರಂಬಾ ಸಜ್ಜನ, ಡಾ ಶೋಭಾ ಗುಡದಿನ್ನಿ, ಡಾ. ರಾಜಶ್ರೀ ಯಲಿವಾಳ, ಡಾ. ಟಿ.ಪಿ. ನಾಯ್ದು, ಡಾ. ವಿದ್ಯಾ ಥೊಬ್ಬಿ, ಡಾ. ಪ್ರಿಯದರ್ಶಿನಿ ಪಾಟೀಲ, ಡಾ. ಆನಂದ ಪಾಟೀಲ, ಡಾ.ಕೃತಿಕಾ ನಾಗುರ, ಡಾ. ಮುತ್ತು ಗುಡದಿನ್ನಿ, ಡಾ.ಆರ್.ಎಂ. ಸಜ್ಜನ, ಡಾ. ಮುದನೂರ, ಡಾ. ಅನಿಕೇತನ ವಲಭ, ಡಾ. ವಿಜಯಕುಮಾರ ವಾರದ, ಡಾ ಉದಯ ನುಚ್ಚಿ, ಡಾ. ಸಿ. ಎಂ. ಕುಲಕರ್ಣಿ, ಡಾ. ವಲ್ಲಭ, ಡಾ. ಗೋಸಾವಿ, ಡಾ.ರಾಘವೇಂದ್ರ ಇಜೇರಿ, ಡಾ. ಶ್ರೀನಿವಾಸ ರಾಯ್ಕರ, ಡಾ. ಭೀಮನಗೌಡ ಬಿರಾದಾರ, ಡಾ. ಸಂದೀಪ ನಾಯಕ, ಡಾ. ಸಂತೋಷ ನಂದಿ, ಡಾ.ಗಿರೀಶ ಕುಲ್ಲೊಳ್ಳಿ, ಡಾ. ಮಂಜುನಾಥ ಕೋಟೆಣ್ಣವರ, ಡಾ. ಮನೋವಿಜಯ ಕಳಸಗೊಂಡ, ಡಾ.ಪರೀಕ್ಷಿತ್ ಕೋಟಿ ಮತ್ತಿತರರಿದ್ದರು.