ಜಿಲ್ಲೆ

ಮಹಾರಾಜ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಅವಿನಾಶ್ ಜೈನಹಳ್ಳಿ

ಮೈಸೂರು: ಮಹಾರಾಜ ಕಾಲೇಜಿಗೆ ಅಧ್ಯಾಪಕರನ್ನು ನೇಮಕ ಮಾಡಿ ತರಗತಿಗಳನ್ನು ನಡೆಸುವಂತೆ ಹಾಗೂ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬುಧವಾರ ಎಐಡಿಎಸ್‌ಒ ನೇತೃತ್ವದಲ್ಲಿ ಕ್ರಾಫರ್ಡ್ ಹಾಲ್ ಎದುರು ಪ್ರತಿಭಟನೆ ನಡೆಸಿದರು.

ಕಾಲೇಜು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಅಧ್ಯಾಪಕರ ನೇಮಕವಾಗದೆ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಹಾಗಾಗಿ ಅಗತ್ಯ ಬೋಧಕರನ್ನು ಕೂಡಲೇ ನೇಮಕ ಮಾಡಬೇಕು. ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಫೈನಾನ್ಸಿಯಲ್ ಅಕೌಂಟ್, ಫಿಸಿಕಲ್ ಎಜುಕೇಶನ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ವಿಷಯಗಳಿಗೆ ಒಂದೇ ಒಂದು ತರಗತಿ ನಡೆದಿಲ್ಲ. ಉಪನ್ಯಾಸಕರನ್ನು ಕೂಡ ನೇಮಕಾತಿ ಮಾಡಿಲ್ಲ. ಒಂದು ವಾರದ ಹಿಂದೆ ಕೂಡ ಗಮನಕ್ಕೆ ತಂದರು ವಿಶ್ವವಿದ್ಯಾಲಯ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಈ ಮಧ್ಯೆ ಡಿಸೆಂಬರ್ 15ರಂದು ಪರೀಕ್ಷೆ ನಡೆಸುತ್ತೇವೆ ಎಂದು ಆದೇಶ ಹೊರಡಿಸಿದ್ದಾರೆ. ಇದನ್ನು ಈ ಕೂಡಲೇ ಹಿಂಪಡೆಯಬೇಕೆಂದು ಅಗ್ರಹಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕುಲಸಚಿವ ಪ್ರೊ.ಮಹದೇವನ್, ಪ್ರತಿಭಟನಕಾರರ ಸಮಸ್ಯೆ ಆಲಿಸಿದರು. ಪರೀಕ್ಷೆಗಳನ್ನು ಮುಂದುಡುತ್ತೇವೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು. ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಸುಭಾಷ್, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಪದಾಧಿಕಾರಿಗಳಾದ ನಿತಿನ್, ಬೀರಪ್ಪ , ದಿಶಾ, ವಿದ್ಯಾರ್ಥಿಗಳಾದ ಹರ್ಷಿತ, ಅಭಿ, ದರ್ಶನ್, ರಕ್ಷಿತ್, ಚಿರಂತನ್ ಇತರರಿದ್ದರು.