ಜಿಲ್ಲೆ

ಕ್ಷಮೆ ಕೇಳಲು ಕೇಂದ್ರ ಗೃಹ ಸಚಿವರಿಗೆ ಆಗ್ರಹ

Chitradurga - Desk - Suresh lamani

ಹೊನ್ನಾಳಿ: ಅಂಬೇಡ್ಕರ್ ಅವರ ಬಗ್ಗೆ ಸಂಸತ್ ಭವನದಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಅವರು ಇಡೀ ರಾಷ್ಟ್ರದ ಜನತೆಯ ಕ್ಷಮೆಯಾಚಿಸಬೇಕು ಎಂದು ಡಿ.ಎಸ್.ಎಸ್. ಸಂಚಾಲಕ ದಿಡಗೂರು ಜಿ.ಎಚ್. ತಮ್ಮಣ್ಣ ಆಗ್ರಹಿಸಿದರು.

ತಾಲೂಕಿನಲ್ಲಿ ಸೋಮವಾರ ತಾಲೂಕು ಮಾದಿಗ ಮತ್ತು ಮಾದಿಗ ಉಪಜಾತಿಗಳ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರಂತಹ ಪ್ರತಿಭಾವಂತ ಮಹಾನ್ ನಾಯಕ ಭೂಮಿಯ ಮೇಲೆ ಹುಟ್ಟದಿದ್ದರೆ ದೌರ್ಜನ್ಯಕ್ಕೆ ಒಳಗಾದ ದಲಿತ ಸಮುದಾಯಗಳಿಗೆ ಸಮಾಜದಲ್ಲಿ ಬದುಕಲಾಗುತ್ತಿರಲಿಲ್ಲ. ಇಡೀ ವಿಶ್ವವೇ ಗೌರವಿಸು ಎಲ್ಲರಿಗೂ ಸಮಬಾಳು, ಸಮಪಾಲು ಒದಗಿಸುವ ಸಂವಿಧಾನವನ್ನು ಅವರು ದೇಶಕ್ಕೆ ಕೊಡದಿದ್ದರೆ ದಲಿತ, ಹಿಂದುಳಿದವರ್ಗ ಹಾಗೂ ಮಹಿಳೆಯರಿಗೆ ಯಾವುದೇ ಸ್ಥಾನಮಾನ ಸಿಗುತ್ತಿರಲಿಲ್ಲ ಎಂದರು.

ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ ಮಾತನಾಡಿ, ಕೇಂದ್ರದ ಸರ್ಕಾರದ ಒಬ್ಬ ಜವಾಬ್ದಾರಿಯುವ ಗೃಹ ಸಚಿವರಾಗಿ ಸಂಸತ್‌ನಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನೇ ಮರೆತು ಮನಸ್ಸಿಗೆ ಬಂದಂತೆ ಮಾತನಾಡಿರುವುದು ಸರಿಯಲ್ಲ. ಇದನ್ನು ಕೇವಲ ದಲಿತ ಸಮುದಾಯ ಅಷ್ಟೇ ಅಲ್ಲ ಇಡೀ ದೇಶದ ಜನತೆ ಖಂಡಿಸಬೇಕು ಎಂದು ಹೇಳಿದರು.

ಪಟ್ಟಣದ ಟಿ.ಬಿ. ವೃತ್ತದ ಕನಕದಾಸ ಪ್ರತಿಮೆಯಿಂದ ನೂರಾರು ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಮಾನವ ಸರಪಳಿ ರಚಿಸಿದರು. ನಂತರ ತಾಲೂಕು ಕಚೇರಿಗೆ ಆಗಮಿಸಿ ಶಿರಸ್ತೇದಾರ್ ಮಂಜುನಾಥ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಡಿಎಸ್‌ಎಸ್‌ನ ಕುರುವ ಮಂಜುನಾಥ್, ಮಾರಿಕೊಪ್ಪದ ಮಂಜಪ್ಪ, ಕರವೇಯ ಶ್ರೀನಿವಾಸ್, ಮಂಜು, ದೇವು, ರಾಜಪ್ಪ, ಹನುಮಂತಪ್ಪ ಸೇರಿ ಅನೇಕ ದಲಿತ ಮುಖಂಡರು ಇದ್ದರು.