ತೇರದಾಳ: ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳಿಂದಲೇ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಹನಗಂಡಿ ಗ್ರಾಮ ಪಂಚಾಯಿತಿಗೆ ಸ್ಥಳೀಯ ಬಿಜೆಪಿ, ಕಾಂಗ್ರೆಸ್ ಸದಸ್ಯರು ಗುರುವಾರ ಬೀಗ ಜಡಿದು ಪ್ರತಿಭಟಿಸಿದರು.
ಆರು ತಿಂಗಳಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸಗಳಿಗೆ ಅನುಮತಿ ನೀಡುತ್ತಿಲ್ಲ. ಬರೀ ಒಬ್ಬರ ಮೇಲೊಬ್ಬರು ಹಾಕುತ್ತಿದ್ದಾರೆ. ಗ್ರಾಮದಲ್ಲಿ ಕಳಪೆ ಕಾಮಗಾರಿ ಮಾಡುತ್ತಾರೆಂದು ಅಧಿಕಾರಿಗಳು ಆರೋಪಿಸುತ್ತಿದ್ದಾರೆ. ಯಾವ ಕಾಮಗಾರಿ ಕಳಪೆ ಆಗಿದೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಗ್ರಾಪಂನ ಯಾವ ಸದಸ್ಯರಿಗೂ ಜಿಪಂ, ತಾಪಂನಲ್ಲಿ ಬೆಲೆ ಇಲ್ಲದಂತಾಗಿದೆ. ರೈತರ ಕಬ್ಬುಗಳು ಹೋಗಲು ರಸ್ತೆಗಳನ್ನು ಮಾಡಬೇಕಿದೆ. ಶಾಲೆಗಳಿಗೆ ಕಾಂಪೌಂಡ್, ಶೆಡ್, ಕೃಷಿ ಹೊಂಡ, ಕೆರೆ ಅಭಿವೃದ್ಧಿ, ಬಾಂಧಾರ ಸೇರಿ ಹಲವು ಕೆಲಸಗಳಿಗೆ ತಡೆ ಹಿಡಿಯಲಾಗಿದೆ. ಹೀಗಾದರೆ ಗ್ರಾಮಸ್ಥರಿಗೆ ಏನು ಉತ್ತರ ನೀಡಬೇಕೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ತಾಪಂ ಎಡಿ ಮುನ್ನೋಳ್ಳಿ, ಪಿಡಿಒ ರಾವಳ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರಾದರೂ ಸ್ಥಳಕ್ಕೆ ಇಒ ಬರುವವರೆಗೆ ಬೀಗ ತೆರವುಗೊಳಿಸಲ್ಲ ಎಂದು ಪಟ್ಟು ಹಿಡಿದರು.
ಬಳಿಕ ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ, ನೆಲದ ಮೇಲೆ ಕುಳಿತಿದ್ದ ಸದಸ್ಯರ ಕೈಹಿಡಿದು ಒಳಗೆ ಕುಳಿತು ಮಾತನಾಡೋಣ ಬನ್ನಿ ಎಂದು ಎಬ್ಬಿಸಿದರೂ ಸದಸ್ಯರು ಒಪ್ಪದಿದ್ದಾಗ ತಾವೇ ಅವರೊಂದಿಗೆ ಕುಳಿತುಕೊಂಡರು. ಆಗ ಸದಸ್ಯರು ಯಾವ ಕಾರಣಕ್ಕೆ ನಮ್ಮ ಕೆಲಸಗಳನ್ನು ತಡೆ ಹಿಡಿಯಲಾಗಿದೆ. ಅಂತಹ ತಪ್ಪು ನಾವೇನು ಮಾಡಿದ್ದೇವೆ ಎಂದು ಇಒ ಪಟ್ಟಿಹಾಳ ಅವರಿಗೆ ಪ್ರಶ್ನಿಸಿದಾಗ ನನ್ನ ಲಾಗಿನ್‌ನಲ್ಲಿ ನಿಮ್ಮ ಪಂಚಾಯಿತಿ ಕಾರ್ಯಗಳು ಯಾವುದೂ ನಿಂತಿಲ್ಲವೆಂದು ತಿಳಿಸಿದರು. ಇದಕ್ಕೆ ನಿಮ್ಮ ಲಾಗಿನ್ ನೀವು ಬಳಸಲ್ಲ. ಎಡಿ ಬಳಸುತ್ತಾರೆ ಅವರನ್ನು ವಿಚಾರಿಸಿ ಎಂದು ಸದಸ್ಯರು ಮಾಹಿತಿ ನೀಡಿದರಲ್ಲದೆ, ನಿಯೋಜನೆಗೊಂಡಿರುವ ಪಿಡಿಒ ಅವರನ್ನು ತಗೆದು ಕಾಯಂ ಪಿಡಿಒ ಹಾಕಬೇಕೆಂದು ಆಗ್ರಹಿಸಿದಾಗ ನಿಮ್ಮ ಎಲ್ಲ ಕೆಲಸಗಳನ್ನು ಕೂಡಲೇ ಆರಂಭಿಸುವ ಜತೆಗೆ ನಾಳೆಯೇ ಪಿಡಿಒ ಅವರನ್ನು ಬದಲಾಯಿಸುವುದಾಗಿ ತಾಪಂ ಇಒ ಭರವಸೆ ನೀಡಿದರು.
ಸದಸ್ಯರಾದ ಚಂದ್ರಶೇಖರ ಗುಬಚಿ, ಪ್ರಕಾಶ ನಾರವ್ವಗೋಳ, ಕುಮಾರ ಕಾಂಬಳೆ, ನಬೀಸಾಬ ಶಿಲ್ಲೇದಾರ, ಹಸನ್ ಮೌಲಾನಾ ಪಕಾಲಿ, ಮಹಾವೀರ ಬಿದರಿ, ಕಮಾಲ್ ರಾಮದುರ್ಗ, ಅನಿಲ ಗುಬಚಿ, ಕರೆಪ್ಪ ದಳವಾಯಿ, ಅಲ್ಲಾಭಕ್ಷ ಅಲಾಸ, ಸಿದ್ದಪ್ಪ ಸೋರಗಾಂವಿ, ಮಂಜುನಾಥ ಕೊಡಗನೂರ, ಪರಶುರಾಮ ಮಾದರ, ರಸೂಲ ಬಾಗಿ, ವಿಠ್ಠಲ ಹೆಗ್ಗನ್ನವರ ಇತರರಿದ್ದರು.