ಜಗಳೂರು: ತಾಲೂಕಿನ ಜಮ್ಮಾಪುರ ಕೆರೆಯಲ್ಲಿ ರೈತರ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮ ಮಣ್ಣು ಸಾಗಾಣಿಕೆ ಮಾಡುತ್ತಿರುವುದನ್ನು ವಿರೋಧಿಸಿ ಮಂಗಳವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.
700 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯಲ್ಲಿ ಸುಮಾರು ವರ್ಷಗಳಿಂದಲೂ ಮಣ್ಣು ಸಾಗಾಣಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಪ್ರತಿದಿನ ಜೆಸಿಬಿ, ಹಿಟಾಚಿ ಮೂಲಕ 25ಕ್ಕೂ ಹೆಚ್ಚು ಲಾರಿಗಳಲ್ಲಿ ಮಣ್ಣನ್ನು ಸಾಗಿಸಲಾಗುತ್ತಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಜಮ್ಮಾಪುರ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೊಳಪಡುತ್ತದೆ. ಇದು ಭದ್ರಾ ಮೇಲ್ದಂಡೆ ಯೋಜನೆಗೆ ಸೇರ್ಪಡೆಯಾಗಿರುವ ಎರಡನೇ ದೊಡ್ಡ ಕೆರೆ. ಆದರೆ ಎಗ್ಗಿಲ್ಲದೆ ಮಣ್ಣು ಸಾಗಿಸಿ ಬೃಹತ್ ಗುಂಡಿ ಬಿದ್ದು, ಕೆರೆ ಆಕಾರ ವಿಕಾರವಾಗಿದೆ ಎಂದರು.
ಉತ್ಕೃಷ್ಟವಾದ ಈ ಮಣ್ಣನ್ನು ತಾಲೂಕಿನ ರೈತರು ಜಮೀನುಗಳಿಗೆ ಹೇರಿಕೊಳ್ಳುವುದು ಸಾಮಾನ್ಯ. ಆದರೆ ಇತ್ತೀಚೆಗೆ ಕೆಲವರು ಇದನ್ನು ವ್ಯವಹಾರ ಮಾಡಿಕೊಂಡು ದಾವಣಗೆರೆ, ಚಿತ್ರದುರ್ಗ ಸೇರಿ ಇತರೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಮಾರಾಟ ಮಾಡುತ್ತಿದ್ದು, ದೊಡ್ಡ ದಂಧೆಯಾಗಿ ಮಾರ್ಪಾಡಾಗಿದೆ.
ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಆದರೆ ಜಮ್ಮಾಪುರ ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ. ಇದರಿಂದ ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರು ಸಿಗುವುದು ಕಷ್ಟವಾಗಿದೆ. ಅಂತರ್ಜಲ ಕುಸಿತದಿಂದ ಬೋರ್ವೆಲ್ಗಳಲ್ಲೂ ನೀರು ಇರುವುದಿಲ್ಲವೆಂಬ ಆತಂಕ ಮನೆ ಮಾಡಿದೆ ಎಂದರು.
ಗ್ರಾಪಂ ಸದಸ್ಯರಾದ ಗಂಗಮ್ಮ, ಪಾಂಡಪ್ಪ, ಬಸವರಾಜಪ್ಪ, ತೋರಣಗಟ್ಟೆ, ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಬಾಲರಾಜ್, ಬಸವರಾಜಪ್ಪ, ಸಾಕಮ್ಮ, ರಂಗಜ್ಜಿ , ಬಾಲಪ್ಪ, ನಾಗರಾಜ್ ಸೇರಿ ಮತ್ತಿತರಿದ್ದರು.
ಜಿಲ್ಲಾಧಿಕಾರಿಗೆ ಕೆರೆ ಕ್ರಮಕ್ಕೆ ಸೂಚನೆ : ಅಕ್ರಮ ಮಣ್ಣು ಸಾಗಾಣಿಕೆ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಕೂಡಲೇ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದರು. ತಹಸೀಲ್ದಾರ್ ಕೆರೆಗೆ ಧಾವಿಸಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೆರೆ ಸಂರಕ್ಷಣಾ ಟಾಸ್ಕ್ಫೋರ್ಸ್ ನಿಯಮದಂತೆ ಸ್ಥಳೀಯ ಗ್ರಾಪಂನಿಂದ ಪರವಾನಗಿ ಪಡೆಯಬೇಕು. ಸಕ್ಷಮ ಪ್ರಾಧಿಕಾರ ಅವಕಾಶ ಕೊಟ್ಟರಷ್ಟೇ ಮಣ್ಣು ತೆಗೆಯಬೇಕು. ಅಲ್ಲದೇ ಸ್ಥಳೀಯ ಗ್ರಾಪಂಗೆ ತೆರಿಗೆ ರೂಪದಲ್ಲಿ ರಾಯಧನ ಪಾವತಿ ನಿಯಮಗಳನುಸಾರ ನಿರ್ದಿಷ್ಟ ಆಳದವರೆಗೆ ಹೂಳನ್ನು ಎತ್ತಬಹುದು. ಆದರೆ ಈ ಕಾನೂನು ಪಾಲಿಸದೆ ಅಕ್ರಮವಾಗಿ ಮಣ್ಣು ತೆಗೆದಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. | ಸೈಯದ್ ಕಲೀಂಉಲ್ಲಾ, ತಹಸೀಲ್ದಾರ್