ಮೈಸೂರು: ದುಡಿಯುವ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ಕೇಂದ್ರ ಸರ್ಕಾರ ನಿರಂತರ ಫ್ಯಾಸಿಸ್ಟ್ ದಾಳಿಗಳನ್ನು ಎಸುಗುತ್ತಿದೆ ಎಂದು ಆರೋಪಿಸಿ ನಗರದ ರಾಮಸ್ವಾಮಿ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನೆ ನಡೆಯಿತು.
29 ಕಾರ್ಮಿಕ ಪರವಾದ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ ವಿರೋಧಿ 4 ಸಂಹಿತೆ ಜಾರಿಗೆ ತರಲು ಮುಂದಾಗಿದೆ. ಈ ಸಂಹಿತೆಯು ಚಾಲ್ತಿಯಲ್ಲಿರುವ ಕಾರ್ಮಿಕರ ಬಹುತೇಕ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಡಿತಗೊಳಿಸಿ ಕಾಯಂ ಉದ್ಯೋಗಗಳನ್ನು ಶಾಶ್ವತವಾಗಿ ರದ್ದುಗೊಳಿಸುತ್ತದೆ. ಬಂಡವಾಳಶಾಹಿ ವರ್ಗ ಮತ್ತು ಅದರ ಅಧೀನ ಸರ್ಕಾರ ಗಳು ತಮ್ಮ ಇಚ್ಛೆಯಂತೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮತ್ತು ವಜಾ ಮಾಡುವ ಅಧಿಕಾರ ದೊರೆಯಲಿದೆ ಎಂದು ಕಾರ್ಮಿಕ ಮುಖಂಡರು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೃಷಿ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ದುರ್ಬಲಗೊಳಿಸಿ ಖಾಸಗಿ ಮಾರುಕಟ್ಟೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸ್ಮಾರ್ಟ್ ಮೀಟರ್ ಅಳವಡಿಕೆ ಮೂಲಕ ವಿದ್ಯುತ್ ಖಾಸಗೀಕರಣಕ್ಕೆ ಬೆಂಬಲ ನೀಡಲಾಗುತ್ತಿದ್ದು, ಕೃಷಿ ಪಂಪ್ ಸೆಟ್‌ಗಳಿಗೂ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಮಾಡಲಾಗುತ್ತಿದೆ. ಯಾವುದೇ ಓಟಿ ಸೌಲಭ್ಯ ಇಲ್ಲದೇ ದಿನಕ್ಕೆ 12 ಗಂಟೆ ದುಡಿಸಿಕೊಳ್ಳಲು ಕಾರ್ಖಾನೆಗಳಿಗೆ ಅನುಮತಿ ನೀಡಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಆರೋಗ್ಯ ಸೇರಿದಂತೆ ಪ್ರತಿಯೊಂದು ನಾಗರಿಕ ಸೌಲಭ್ಯಗಳನ್ನು ಖಾಸಗೀಕರಣ ಮಾಡುತ್ತಿರುವುದು ಜನವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ಸಂಘಟನೆ ಪ್ರಮುಖರಾದ ಎಚ್.ಆರ್.ಶೇಷಾದ್ರಿ, ಬಿ.ರಾಮಕೃಷ್ಣ, ದೇವದಾಸ್, ಚಂದ್ರಶೇಖರ ಮೇಟಿ, ಪಿ.ಎಸ್. ಸಂಧ್ಯಾ, ಹರೀಶ್, ಮುದ್ದುಕೃಷ್ಣ, ಜಯರಾಂ, ಬಾಲಾಜಿ ರಾವ್, ಹೊಸಕೋಟೆ ಬಸವರಾಜ್, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ಎಚ್.ಎಂ. ಬಸವರಾಜು, ಕಂದೇಗಾಲ ಶ್ರೀನಿವಾಸ್, ಜಗದೀಶ್ ಸೂರ್ಯ ಹಾಗೂ ಇತರರು ಪಾಲ್ಗೊಂಡಿದ್ದರು.