ಜಿಲ್ಲೆ

ಸಾಗುವಳಿ ಹಕ್ಕು ಪತ್ರ ವಿತರಿಸಲು ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

ಮೈಸೂರು: ಗೋಮಾಳ, ಅರಣ್ಯ ಭೂಮಿ ಹಾಗೂ ನಗರದ 10 ಕಿಮೀ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುವ ರೈತರಿಗೆ ಸಾಗುವಳಿ ಹಕ್ಕು ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು.


ಕಳೆದ 50-60 ವರ್ಷಗಳಿಂದ ಗೋಮಾಳ, ಗುಂಡುತೋಪು, ಅರಣ್ಯಭೂಮಿಗಳಲ್ಲಿ ಬಡ ರೈತರು ಉಳುಮೆ ಮಾಡುತ್ತಿದ್ದಾರೆ. ಈ ಹಿಂದೆ ಫಾರಂ ನಂಬರ್ 50-57ರಲ್ಲಿ ಅರ್ಜಿ ಸಲ್ಲಿಸಿದ್ದರೂ ಅವುಗಳನ್ನು ವಿಲೇವಾರಿ ಮಾಡಿಲ್ಲ. ಸಾಗುವಳಿ ಪತ್ರ ಇಲ್ಲದ ಕಾರಣ ಸರ್ಕಾರಿ ಸವಲತ್ತುಗಳು, ಸಾಲ ಸೌಲಭ್ಯ, ಬರ ಪರಿಹಾರ ಇತ್ಯಾದಿ ಸೌಲಭ್ಯಗಳಿಂದ ಈ ಸಾಗುವಳಿದಾರರು ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಈ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು. ತಾಲೂಕಿನ ಎಲ್ಲ ಗ್ರಾಮಗಳಲ್ಲಿರುವ ಗೋವುಗಳ ಸಮೀಕ್ಷೆ ಮಾಡಿ ಆ ಹಸುಗಳಿಗೆ ಬೇಕಾದ ಭೂಮಿಯನ್ನು ಬಿಟ್ಟು ಗೋಮಾಳದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ವಿತರಿಸಲು ಕ್ರಮವಹಿಸಬೇಕು. ಆದಿವಾಸಿಯೇತರ ಅರಣ್ಯ ಭೂಮಿ ಬಡ ಸಾಗುವಳಿದಾರರಿಗೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಗೆ ತಿದ್ದುಪಡಿ ಮಾಡಿ ಹಕ್ಕು ಪತ್ರ ನೀಡಬೇಕು. ನಗರ ಮಿತಿಯನ್ನು 10 ಕಿ.ಮೀ.ಗಿಂತಲೂ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.


ಅರಣ್ಯದಂಚಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆಯು ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದು, ಇದನ್ನು ನಿಲ್ಲಿಸಬೇಕು. ಕೂಡಲೇ ಅಕ್ರಮ-ಸಕ್ರಮ ಸಮಿತಿ ರಚಿಸಿ ಸಾಗುವಳಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.


ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ರೈತರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರೈತರಿಗೆ ಬರ ಪರಿಹಾರ ನೀಡಬೇಕು. ತಾಲೂಕಿನ ಎಲ್ಲ ಜಮೀನುಗಳನ್ನು ಹದ್ದುಬಸ್ತು ಮಾಡಿಸಿ ಪಕ್ಕಾ ಪೋಡು ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಡೀ ರಾಜ್ಯವನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.


ಮುಖಂಡರಾದ ಜಗದೀಶ್ ಸೂರ್ಯ, ದೂರ ಲೋಕೇಶ್, ಸೋಮಶೇಖರ್, ಕೆಂಪಯ್ಯ, ಹರೀಶ್, ಕೆಂಪಮ್ಮ, ಚೌಡಮ್ಮ, ಕನಕ ನಾಯಕ, ಮರೀಚೌಡನಾಯಕ, ಪಾಪ ನಾಯಕ, ಆಯರಳ್ಳಿ ಸಣ್ಣನಾಯಕ, ಮಹದೇವಸ್ವಾಮಿ, ತೋಟಪ್ಪ, ರವಿಕುಮಾರ್, ಕರಿ ರಾಮಯ್ಯ, ರಾಜೇಂದ್ರ, ಚಿಕ್ಕಣ್ಣ ಶಂಭುಲಿಂಗಪ್ಪ ಇನ್ನಿತರರಿದ್ದರು.