ಜಿಲ್ಲೆ

ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ

ಆರ್.ಕೃಷ್ಣ

ಮೈಸೂರು: ರಾಜ್ಯ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಘೋಷಿಸಬೇಕು ಎಂದು ಒತ್ತಾ ಯಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಡಾ.ರಾಜ್‌ಕುಮಾರ್ ಉದ್ಯಾನದ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜರ ಕಾಲದಿಂದಲೂ ಶಿಕ್ಷಣಕ್ಕೆ ಒತ್ತು ನೀಡಿದ ಮೈಸೂರಿನಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲ. ಹಾಗಾಗಿ, ತವರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದರಿಂದ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮೈಸೂರು ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜ್ಯದಲ್ಲೇ ಪ್ರಥಮ ವಿಶ್ವವಿದ್ಯಾಲಯವನ್ನು ನಿರ್ಮಿಸಿ ನೂರಾರು ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಹಕಾರಿಯಾಗಿದ್ದಾರೆ. ಇಂತಹ ನಗರಕ್ಕೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಲ್ಲವಾಗಿದೆ. ಮಹಾರಾಜ, ಮಹಾರಾಣಿ ಸರ್ಕಾರಿ ಕಾಲೇಜುಗಳಿಂದ ಬಹಳಷ್ಟು ಬಡ ಮಕ್ಕಳಿಗೆ ಶಿಕ್ಷಣ ದೊರಕುತ್ತಿದೆ. ಮೈಸೂರಿನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿದ್ದು ಬಡವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸುಸಜ್ಜಿತ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿ ಹಾಸ್ಟೆಲ್, ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್‌ಗೌಡ, ಮುಖಂಡರಾದ ಸಿ.ಎಚ್.ಕೃಷ್ಣಯ್ಯ , ಪ್ರಭುಶಂಕರ್, ಗೋಲ್ಡ್ ಸುರೇಶ್, ವಿಜಯೇಂದ್ರ, ಸುನೀಲ್, ಶಿವಲಿಂಗಯ್ಯ, ಆಟೋ ಮಹಾದೇವ, ರವಿ ಒಲಂಪಿಯ, ಮಹಾದೇವ ಸ್ವಾಮಿ, ಲಕ್ಷ್ಮೀ, ಭಾಗ್ಯಮ್ಮ , ಅಂಬಾ ಅರಸ್, ಮಂಜುಳಾ, ಶುಭಶ್ರೀ, ಡಾ.ನರಸಿಂಹೇಗೌಡ, ಪುಷ್ಪಾವತಿ, ರವೀಶ್, ಶಿವನಾಯಕ್, ರವೀಶ್, ಪರಿಸರ ಚಂದ್ರು, ನಂದಕುಮಾರ್, ಮಹಾದೇವ, ದರ್ಶನ್‌ಗೌಡ, ಬಸವರಾಜು, ಪ್ರಮೋದ್, ಶ್ರೀನಿವಾಸ್, ಆನಂದ್, ಗಣೇಶ್ ಪ್ರಸಾದ್ ಇತರರು ಇದ್ದರು.