ಜಿಲ್ಲೆ

ಕಬಿನಿ, ವರುಣ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ

ಅವಿನಾಶ್ ಜೈನಹಳ್ಳಿ

ಮೈಸೂರು: ಟೆಂಡರ್ ಪದ್ಧತಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಬಿನಿ ಮತ್ತು ವರುಣ ಗುತ್ತಿಗೆದಾರರ ಸಂಘದಿಂದ ನಗರದ ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಹಲವು ವರ್ಷಗಳಿಂದಲೂ ಸರ್ಕಾರದ ಮಟ್ಟದಲ್ಲಿ ಹಾಗೂ ತಮ್ಮ ಇಲಾಖೆಗಳ ಮೂಲಕ ಟೆಂಡರ್ ಕಾಮಗಾರಿಗಳ ಪ್ಯಾಕೇಜ್ ಪದ್ಧತಿ ಕೈಬಿಡಬೇಕೆಂದು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ನ್ಯಾಯಾಲಯದಲ್ಲೂ ಸಹ ಪ್ಯಾಕೇಜ್ ಪದ್ಧತಿಯ ವಿರುದ್ಧವಾಗಿ ಆದೇಶವಾಗಿದೆ. ಇತ್ತೀಚೆಗೆ ತಮ್ಮ ಇಲಾಖಾ ಅನುದಾನವನ್ನು ಪ್ಯಾಕೇಜ್ ಪದ್ಧತಿ ಮಾಡುವುದರಿಂದ ದೊಡ್ಡ-ದೊಡ್ಡ ಕಂಪನಿ ಗುತ್ತಿಗೆದಾರರಿಗೆ ಅವರ ವ್ಯಾಪ್ತಿಯಲ್ಲಿ ನೀಡಲು ಅನುಕೂವಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಪ್ಯಾಕೇಜ್ ಪದ್ಧತಿಯಲ್ಲಿ ಟೆಂಡರ್‌ಗಳನ್ನು ಕರೆಯಬಾರದು ಎಂದು ಆಗ್ರಹಿಸಿದರು.

ಕಳೆದ ವರ್ಷ ಕರೆದಿದ್ದ ಹಲವು ಟೆಂಡರ್ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಭಾಗವಹಿಸಿದ್ದು ಇದುವರೆಗೂ ಆ ಕಾಮಗಾರಿಗಳು ಅನುಮೋದನೆಗೊಂಡಿಲ್ಲ. ಇದರ ಬಗ್ಗೆ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಟೆಂಡರ್ ಕಾಮಗಾರಿಗಳಿಗಾಗಿ ನಾವು ನೀಡುತ್ತಿರುವ ಭದ್ರತಾ ಠೇವಣಿಯನ್ನು ಬೇರೆ ಎಲ್ಲ ಇಲಾಖೆಗಳಲ್ಲಿ ಇರುವಂತೆ ನಮ್ಮ ನೀರಾವರಿ ನಿಗಮದಲ್ಲೂ 3 ವರ್ಷದ ಬದಲಿಗೆ 1 ವರ್ಷಕ್ಕೆ ನಿಗದಿಪಡಿಸುವಂತೆ ಆದೇಶಿಸಬೇಕು. ಇದುವರೆಗೂ ಇರುವ ಹಳೆಯ ಬಿಲ್ಲುಗಳಲ್ಲಿ 20 ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಬಿಲ್‌ಗಳನ್ನು ಪೂರ್ಣವಾಗಿ ಪಾವತಿಸಿ, ಅದಕ್ಕಿಂತ ಮೇಲ್ಪಟ್ಟ ಬಿಲ್‌ಗಳನ್ನು ಸೀನಿಯಾರಿಟಿ ಆಧಾರದಲ್ಲಿ ಶೀಘ್ರವಾಗಿ ಪಾವತಿಸಬೇಕು. 50 ಲಕ್ಷ ರೂ. ಕಾಮಗಾರಿಗಳಿಗೆ ಯಾವುದೇ ಕಂಡಿಷನ್ ಇಲ್ಲದೆ ಟೆಂಡರ್ ಕಾಮಗಾರಿಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿ 1 ಕೋಟಿ ರೂ. ಕಾಮಗಾರಿಗೆ ಇರುವ ಕಂಡಿಷನ್‌ಗಳನ್ನು ಸಡಿಲಗೊಳಿಸಿ ಟೆಂಡರ್‌ನಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಬೇಕೆಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಜಿ.ಸುರೇಶ್, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಸಿ.ಎ.ಕೃಷ್ಣ, ಗುತ್ತಿಗೆದಾರರಾದ ಯೋಗೇಶ್, ಎಚ್.ಎಂ.ಶಿವಮೂರ್ತಿ, ನಂದೀಶ್, ಬಸವಣ್ಣ, ನಾಗರಾಜಮೂರ್ತಿ ಇದ್ದರು.