ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬುಧವಾರ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರದ ವಿರುದ್ಧ ಜಯ ಕರ್ನಾಟಕ ಜನಪರ ವೇದಿಕೆ, ಕನ್ನಡ ಸೇನೆ ಕಾರ್ಯಕರ್ತರು ಮಂಡ್ಯದಲ್ಲಿ ರಸ್ತೆ ತಡೆ ನಡೆಸಿದರು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಮೆರವಣಿಗೆ ಹೊರಟ ಕಾರ್ಯಕರ್ತರು ಬಳಿಕ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ತೆರಳಿದರು.
ಇದಕ್ಕೂ ಮುನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅಂತೆಯೇ ಕಾವೇರಿ ಸಂಕಷ್ಟಕ್ಕೆ ಶಾಸಕರು, ಸಂಸದರ ಸ್ಪಂದಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ರೈತರಿಗೆ ಮಾತು ಕೊಟ್ಟಿದ್ದ ರಾಜ್ಯಸರ್ಕಾರ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಬೆನ್ನಲ್ಲೇ ರಾತ್ರೋರಾತ್ರಿ ಕದ್ದು ಮುಚ್ಚಿ ನೀರು ಬಿಡುವ ಮೂಲಕ ರೈತರಿಗೆ ದ್ರೋಹ ಮಾಡಿದೆ ಎಂದು ಹೇಳಿದರು.
ಮಳೆ ಕೊರತೆಯಿಂದ ಜಿಲ್ಲೆಯ ಏಳು ತಾಲೂಕುಗಳು ಬರಪೀಡಿತ ಪ್ರದೇಶ ವ್ಯಾಪ್ತಿಗೆ ಸೇರಿದೆ. ಆದರೂ ಸಹ ಜಲಾಶಯದಿಂದ ನೀರು ಬಿಡುವ ಮೂಲಕ ಕುಡಿಯುವ ನೀರನ್ನು ಸಹ ಅನ್ಯರ ಪಾಲು ಮಾಡುತ್ತಿದೆ. ಸಂಕಷ್ಟ ಕಾಲದಲ್ಲಿ ಕರ್ನಾಟಕದ ನೆರವಿಗೆ ಬಾರದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಎರಡು ರಾಜ್ಯಗಳ ನಡುವೆ ಮಾತುಕತೆ ನಡೆಸಿ ಸಂದಾನ ಸೂತ್ರ ರೂಪಿಸುವಲ್ಲಿ ವಿಫಲವಾಗಿದೆ. ಕಾವೇರಿ ಕೊಳ್ಳದ ಜಲಾಶಯಗಳು ಬರಿದಾಗಿ ರೈತರಿಗೆ ಅನ್ಯಾಯವಾಗುತ್ತಿದ್ದರೂ ರಾಜ್ಯದ ಸಂಸದರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಶಾಸಕರು ನೀರು ನಿಲ್ಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ. ಇನ್ನು ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗುತ್ತಿದ್ದರೂ ಚಿತ್ರರಂಗದ ನಟ, ನಟಿಯರು ಹೋರಾಟಕ್ಕೆ ಇಳಿದಿಲ್ಲ. ಕನ್ನಡ ಚಿತ್ರರಂಗ ಕಾವೇರಿ ಹೋರಾಟ ಮಾಡದಿದ್ದರೆ ಕಲಾವಿದರ ವಿರುದ್ಧ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಶ್ರೀನಿವಾಸ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಕುಮಾರಸ್ವಾಮಿ, ಕೃಷ್ಣಮೂರ್ತಿ, ಉದಯಶೆಟ್ಟಿ ಇತರರಿದ್ದರು.