ಜಿಲ್ಲೆ

ಬಿಸಿಯೂಟ ನೌಕರರಿಂದ ಪ್ರತಿಭಟನೆ

ವಿವೇಕಾನಂದ ದಾಸನಕೊಪ್ಪ

ಬ್ಯಾಡಗಿ: ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲೂಕು ಬಿಸಿಯೂಟ ತಯಾರಕರು ಹಾಗೂ ಸಹಾಯಕಿಯರ ಸಂಘದ ಕಾರ್ಯಕರ್ತೆಯರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷೆ ಸರೋಜಾ ಹಿರೇಮಠ ಮಾತನಾಡಿ, ಶಿಕ್ಷಣ ಇಲಾಖೆ ಮೂಲಕ ಸರ್ಕಾರ ಅನುಷ್ಠಾನಗೊಳಿಸಿದ ಅಕ್ಷರ ದಾಸೋಹ ಯೋಜನೆಯಡಿ ಎರಡು ದಶಕದಿಂದ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಕನಿಷ್ಠ ದಿನಗೂಲಿಯಷ್ಟು ವೇತನ ಸಿಗುತ್ತಿಲ್ಲ. ಬೆಲೆ ಏರಿಕೆಯ ದಿನಗಳಲ್ಲಿ ಜೀವನ ನಿರ್ವಹಣೆ ದುಸ್ತರವಾಗಿದೆ. ಈ ಕೆಲಸ ನಂಬಿದ ಹಲವು ಕುಟುಂಬಗಳಿಗೆ ಬೇರೆ ದಾರಿಯೇ ಇಲ್ಲದಂತಾಗಿದೆ. ಸರ್ಕಾರ ಬೇರೆ ಬೇರೆ ರಾಜ್ಯಗಳಲ್ಲಿ ಬಿಸಿಯೂಟ ತಯಾರಕರಿಗೆ ನೀಡಿದಷ್ಟು ವೇತನ ನಮಗೂ ನೀಡಬೇಕು ಎಂದು ಒತ್ತಾಯಿಸಿದರು.

2024ರ ಏಪ್ರಿಲ್, ಮೇನಲ್ಲಿ ರಜೆಯಲ್ಲಿ ಕಾರ್ಯಕರ್ತೆಯರು ಕೆಲಸ ನಿರ್ವಹಿಸಿದ್ದು, ಎರಡು ತಿಂಗಳ ವೇತನ ಈವರೆಗೂ ನೀಡಿಲ್ಲ. ಕೂಡಲೇ ಈ ಹಣ ಬಿಡುಗಡೆಗೊಳಿಸಬೇಕು. 2025-26ನೇ ಸಾಲಿನ ಬಜೆಟ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಡಿ ದರ್ಜೆ ನೌಕರರಿಲ್ಲದ ಕಾರಣ ಬಿಸಿಯೂಟ ನೌಕರರಿಂದ ಇತರ ಶಾಲಾ ಕೆಲಸ ಕಾರ್ಯ ಮಾಡಿಸಲಾಗುತ್ತಿದೆ. ಶಿಕ್ಷಣ ಇಲಾಖೆ ನಮ್ಮನ್ನು ಸಿಬ್ಬಂದಿಯಾಗಿ ನೇಮಿಸಿಕೊಳ್ಳುವ ಮೂಲಕ ನ್ಯಾಯ ಒದಗಿಸಬೇಕು. ಉತ್ತರ ಪ್ರದೇಶದ ಅಲಹಾಬಾದ್ ನ್ಯಾಯಾಲಯ ಅಲ್ಲಿಯ ಸರ್ಕಾರಕ್ಕೆ ಕೆಲ ನಿರ್ದೇಶನ ನೀಡಿದ್ದು, ಆ ಸೌಲಭ್ಯಗಳನ್ನು ರಾಜ್ಯದಲ್ಲಿಯೂ ಜಾರಿಗೆ ತರಬೇಕು. ಅಡುಗೆ ಕಾರ್ಯನಿರ್ವಹಿಸುವಾಗ ಸಿಲಿಂಡರ್ ಇತ್ಯಾದಿಗಳಿಂದ ಬೆಂಕಿ ಅನಾಹುತಕ್ಕೆ ಬಲಿಯಾದವರಿಗೆ 5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 2 ಲಕ್ಷ ರೂ. ವಿತರಿಸಲು ಆದೇಶ ಮಾಡಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ತಾಲೂಕಿನಿಂದ ಆಗಮಿಸಿದ 500ಕ್ಕೂ ಹೆಚ್ಚು ಕಾರ್ಯಕರ್ತೆಯರು ಕೆಲಕಾಲ ಪ್ರತಿಭಟನೆ ನಡೆಸಿ, ಸರ್ಕಾರದ ನೀತಿ ಖಂಡಿಸಿ ಘೊಷಣೆ ಕೂಗಿದರು. ಬಳಿಕ ಶಿರಸ್ತೇದಾರ್ ಮಂಜುಳಾ ನಾಯಕ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ಎಐಟಿಯುಸಿ ಸಂಘಟನೆ ರಾಜ್ಯಾಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ, ಪದಾಧಿಕಾರಿಗಳಾದ ವಿನಾಯಕ ಕುರುಬರ, ಜಿ.ಡಿ. ಪೂಜಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹುಲ್ಲಾಳ, ಶಾಂತಮ್ಮ ಎಂ., ಶೋಭಾ ಬಿ.ಎಸ್. ಇತರರಿದ್ದರು.