ಬೆಳಗಾವಿ: ಹಾಸ್ಟೆಲ್ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ಹೊರ ಗುತ್ತಿಗೆ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಸರ್ಕಾರ ನೇರ ನೇಮಕಾತಿ ಮಾಡಬಾರದು. ಹೊರ ಗುತ್ತಿಗೆ ಪದ್ಧತಿ ಕೈ ಬಿಡಬೇಕು. ಸಿ ಮತ್ತು ಡಿ ವರ್ಗದ ಹೊರ ಗುತ್ತಿಗೆ ಸಿಬ್ಬಂದಿಗೆ ನಿವೃತ್ತಿ ಸೇವಾ ಭದ್ರತೆ ನೀಡಬೇಕು ಮತ್ತು ನೇರವಾಗಿ ಇಲಾಖೆಯಿಂದ ಮಾಸಿಕ ವೇತನ ಬ್ಯಾಂಕ್ ಖಾತೆಗೆ ಹಾಕಬೇಕು. ಕಾರ್ಮಿಕ ಇಲಾಖೆಯ ಆದೇಶದಂತೆ ಕನಿಷ್ಠ ವೇತನ ನೀಡಬೇಕು. ಕಾನೂನು ಪ್ರಕಾರ ವಾರದ ರಜೆ, ಹಬ್ಬ ಹಾಗೂ ಹೆರಿಗೆ ರಜೆ ನೀಡಬೇಕು. ಸಂಬಳದ ಚೀಟಿ, ಇಎಸ್‌ಐ, ಪಿಎಫ್‌ಗೆ ಹಣ ತುಂಬಿದ ರಸೀದಿ ಕೊಡಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ವೇತನ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆ ಮಾಡಿರುವ ಆದೇಶ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಿದಂತೆ ಬಿಸಿಎಂ ಇಲಾಖೆಯ ಸಿಬ್ಬಂದಿ ನೇಮಕ ಹೆಚ್ಚಳ ಮಾಡಬೇಕು ಮತ್ತು ನೇರ ನೇಮಕಾತಿ ಸಮಯದಲ್ಲಿ ಕೆಲಸ ಕಳೆದುಕೊಂಡವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ನಿವೃತ್ತಿ ನಂತರ ನಮ್ಮ ಜೀವನ ನಿರ್ವಹಣೆಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ಮನವಿ ಸಲ್ಲಿಸಿದರು.
ಪ್ರದೀಪ ದಳವಾಯಿ, ಹುಲಗಪ್ಪ ಚಲವಾದಿ, ಭೀಮಾಶೆಟ್ಟಿ ಯಂಪಳ್ಳಿ, ದ್ವಾರಕಾ ಯದ್ದಲಪುಡಿ, ರೇಣುಕಾ ನಾಗನೂರ, ಲಕ್ಕಪ್ಪ ಕಾಂಬಳೆ ಇತರರಿದ್ದರು.