ಜಿಲ್ಲೆ

ಹಿಂದುಪರ ಸಂಘಟನೆಗಳಿಂದ ಪ್ರತಿಭಟನೆ

ಉತ್ತರ ಕನ್ನಡ ಡೆಸ್ಕ್

ಶಿರಸಿ: ಸನಾತನ ಧರ್ಮವನ್ನು ಅವಹೇಳನ ಮಾಡಿದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಬಂಧನಕ್ಕೆ ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಹಾಗೂ ವಿವಿಧ ಹಿಂದುಪರ ಸಂಘಟನೆಗಳ ವತಿಯಿಂದ ನಗರದ ಹಳೆಯ ಬಸ್ ನಿಲ್ದಾಣ ವೃತ್ತದ ಬಳಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸನಾತನ ಹಿಂದು ಧರ್ಮದ ಹುಟ್ಟಿಗೆ ಪೂರ್ವಜರು ಕಾರಣೀಕರ್ತರು. ಹಲವಾರು ಮಹನೀಯರ ತ್ಯಾಗದಿಂದ ಜನ್ಮ ತಾಳಿದ ಹಿಂದು ದೇಶದಲ್ಲಿ ತಮಿಳುನಾಡಿನ ಸಚಿವ ಉದಯ ಸ್ಟಾಲಿನ್ ನೀಡಿದ ಬೇಜವಾಬ್ದಾರಿಯುತ ಹೇಳಿಕೆ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಹೋರಾಡುವ ಅನಿವಾರ್ಯತೆಯಿದೆ ಎಂದರು.

ಹಿಂದುಸ್ತಾನದ ಜನತೆ ಹಿಂದಿನಂತೆ ಇಲ್ಲ. ಕಾಲ ಬದಲಾಗಿದೆ ಎಂಬುದನ್ನು ಹಿಂದು ಧರ್ಮ ವಿರೋಧಿಸುವವರು ಅರ್ಥ ಮಾಡಿಕೊಳ್ಳಬೇಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಲಿಷ್ಠ ಭಾರತ ರೂಪುಗೊಳ್ಳುತ್ತಿದೆ. ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿದ ಸ್ಟಾಲಿನ್ ಮೇಲೆ ರಾಜ್ಯಪಾಲರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಂದು ಜಾಗರಣ ವೇದಿಕೆಯ ಕೇಶವ ಮರಾಠಿ ಮಾತನಾಡಿ, ಜಾತಿ ಮಧ್ಯದ ಭಿನ್ನಾಭಿಪ್ರಾಯ ಮರೆತು ನಾವೆಲ್ಲರೂ ಜಾಗೃತರಾಗಬೇಕು. ಸನಾತನ ಧರ್ಮವನ್ನು ಅವಹೇಳನ ಮಾಡಿದ ಉದಯ ಸ್ಟಾಲಿನ್ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಬೇಕು. ಮುಂದಿನ ದಿನಗಳಲ್ಲಿ ಹಿಂದು ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ ಕರ್ಕಿ, ತಾಲೂಕು ಸಂಚಾಲಕ ಸತೀಶ ನಾಯ್ಕ, ಚಂದ್ರು ಎಸಳೆ, ಆರ್.ಡಿ. ಹೆಗಡೆ, ಆರ್.ವಿ. ಹೆಗಡೆ ಚಿಪಗಿ, ಗಣಪತಿ ನಾಯ್ಕ, ವೀಣಾ ಶೆಟ್ಟಿ, ಸೀತಾರಾಮ ಭಟ್ಟ, ಉಷಾ ಹೆಗಡೆ, ರಾಜೇಶ ಶೆಟ್ಟಿ, ಗ್ರಾಪಂ ಅಧ್ಯಕ್ಷ ಪ್ರದೀಪ ಹೆಗಡೆ ಮತ್ತಿತರರು ಇದ್ದರು.