ಹಗರೆ: ಬೇಲೂರಿನಲ್ಲಿ ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಘಟನೆ ಖಂಡಿಸಿ ಹಗರೆ ವೃತ್ತದಲ್ಲಿ ಭಾನುವಾರ ಹಿಂದು ಮುಖಂಡರು ಹಾಗೂ ಯುವಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಹಿಂದು ಯುವ ಮುಖಂಡ ಪಿ.ಆರ್.ದಿನೇಶ್ ಮಾತನಾಡಿ, ಹಿಂದುಗಳ ಭಾವನೆಗೆ ಧಕ್ಕೆ ತರುವ ಹೀನ ಕೃತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಿಂದುಗಳು ಈ ದುಷ್ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಗಣಪತಿ ವಿಗ್ರಹದ ಮೇಲೆ ಚಪ್ಪಲಿ ಇಟ್ಟು ಹೀನ ಕೃತ್ಯವನ್ನು ಹಿಂದು ಸಮಾಜ ಸಹಿಸುವುದಿಲ್ಲ. ನಾವು ಮೌನವಾಗಿದ್ದಷ್ಟು ಒಂದಿಲ್ಲೊಂದು ದುಷ್ಕೃತ್ಯಗಳು ಹಿಂದು ದೇವಾಲಯಗಳ ಮೇಲೆ ಆಗುತ್ತಲೇ ಇವೆ. ಪೊಲೀಸ್ ಇಲಾಖೆ ಹಾಗೂ ಸರ್ಕಾರ ಆದಷ್ಟು ಬೇಗ ತಪ್ಪಿತಸ್ಥರನ್ನು ಹುಡುಕಿ ಶಿಕ್ಷಿಸಬೇಕು. ಜತೆಗೆ ಈ ಕೆಲಸಕ್ಕೆ ಸಹಕರಿಸಿದವರ ಮೇಲೆ ಕ್ರಮವಾಗಬೇಕು. ಇಲ್ಲದಿದ್ದರೆ ತೀವ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಡಿ.ಶಾಂತ್‌ಕುಮಾರ್ ಮಾತನಾಡಿ, ಈ ಘಟನೆ ಹಿಂದು ಸಮಾಜಕ್ಕಾದ ಅಪಮಾನ. ಚಪ್ಪಲಿ ಇಟ್ಟಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸುವ ಪ್ರಯತ್ನವನ್ನು ಪೊಲೀಸರು ಮಾಡಬಾರದು. ಬದಲಾಗಿ ಅಪರಾಧಿಯನ್ನು ಹುಡುಕಿ ವಿಚಾರಣೆ ನಡೆಸಿ ನಂತರ ತಮ್ಮ ಹೇಳಿಕೆ ಬಿಡುಗಡೆ ಮಾಡಬೇಕು. ಒಂದು ವೇಳೆ ಆ ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದರೂ ಆಕೆಯನ್ನು ಶಿಕ್ಷೆಗೆ ಒಳಪಡಿಸಬೇಕು. ಇದು ಸಮಾಜಘಾತುಕ, ಕೊಮು ಗಲಭೆಗೆ ಕಾರಣವಾಗುವ ಕೆಲಸವಾಗಿರುವುದರಿಂದ ಎಚ್ಚರಿಕೆಯಿಂದ ಪೊಲೀಸ್ ಇಲಾಖೆ ಸತ್ಯಾಂಶವನ್ನು ಸಮಾಜದ ಮುಂದಿಡಬೇಕು. ಆದಷ್ಟು ಬೇಗ ಅಪರಾಧಿಯನ್ನು ಹುಡುಕಿ ಬಂಧಿಸದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ದಿಲೀಪ್ ಕುಮಾರ್, ಶೇಖರ್‌ಗೌಡ, ಮಂಜುನಾಥ್, ಛಲವಾದಿ ಪುಟ್ಟರಾಜು, ರಘು, ಇಂತಿಯಾಸ್ ಖಾನ್, ಆನಂದ್, ಶಂಕರ್, ನವೀನ್, ಶಿವಕುಮಾರ್, ಮಹಮದ್, ರುದ್ರೇಶ್, ಆಟೋ ದೇವು, ಮಧು ಇತರರು ಭಾಗವಹಿಸಿದ್ದರು.