ಜಿಲ್ಲೆ

ಮೈಸೂರಿನಲ್ಲಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ

ಸದೇಶ್ ಕಾರ್ಮಾಡ್

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹತ್ತಾರು ವರ್ಷಗಳಿಂದ 18 ಸಾವಿರ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ 5,623 ಅತಿಥಿ ಉಪನ್ಯಾಸಕರು ಯುಜಿಸಿ ಅರ್ಹತೆ ಪಡೆದವರಿದ್ದು, ಉಳಿದ 5,353 ಅತಿಥಿ ಉಪನ್ಯಾಸಕರು ನಾನ್-ಯುಜಿಸಿಗಳಾಗಿದ್ದಾರೆ. ಸಾವಿರಾರು ಅತಿಥಿ ಉಪನ್ಯಾಸಕರು ಎಂ.ಫಿಲ್ ಪದವಿ ಪಡೆದಿದ್ದಾರೆ. ಇವರೆಲ್ಲರೂ ಹತ್ತಾರೂ ವರ್ಷಗಳ ಕಾಲ ಬೋಧನಾ ಅನುಭವ, ಬೋಧನಾ ಕೌಶಲ್ಯ ಹೊಂದಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಯುಜಿಸಿ ಅರ್ಹತೆ ಪಡೆದಿಲ್ಲ ಎಂಬ ಕಾರಣದಿಂದ ಶೈಕ್ಷಣಿಕ ಗುಣಮಟ್ಟ ಕುಸಿದಿಲ್ಲ. ಇದುವರೆಗೂ ಯುಜಿಸಿ ನಿಯಮಾವಳಿಗಳಲ್ಲಿ ಸೂಚಿಸಿರುವಂತೆ ಕಾಯಂ ಅಧ್ಯಾಪಕರುಗಳಿಗೆ ನೀಡಿರುವ ಯಾವುದೇ ರಿತೀಯ ಸವಲತ್ತುಗಳನ್ನು ಪಡೆಯದೇ ತಾತ್ಕಾಲಿಕ ನೌಕರರಾಗಿಯೇ, ಕನಿಷ್ಠ ಗೌರವಧನ ಪಡೆದು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರೂ ಸೂಕ್ತ ಸೌಲಭ್ಯ ನೀಡುತ್ತಿಲ್ಲ ಎಂದು ಅತಿಥಿ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಒಂದೂವರೆ ತಿಂಗಳಿಂದ ಗೌರವಧನವೂ ಇಲ್ಲದೆ ನಮ್ಮಗಳ ಬದುಕು, ಕುಟುಂಬಗಳ ಸ್ಥಿತಿ ಹೇಳತೀರದಾಗಿದೆ. ದಶಕಗಳಿಂದ ನಮ್ಮಿಂದ ತಾತ್ಕಾಲಿಕ ಸೇವೆ ಪಡೆದ ಸರ್ಕಾರ ಮತ್ತು ಇಲಾಖೆ ನಮ್ಮನ್ನು ತಾತ್ಕಾಲಿಕ ಸೇವೆಯಲ್ಲಿ ಉಳಿಸಿಕೊಳ್ಳಬೇಕು. 2025-26ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿಯ ಬಿಕ್ಕಟ್ಟನ್ನು ಸರ್ಕಾರದ ಹಂತದಲ್ಲೇ ಬಗೆಹರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ.ಸೋಮಶೇಖರ್, ಪದಾಧಿಕಾರಿಗಳಾದ ರಾಜೇಶ್ ಕುಮಾರ್, ನಾಗರಾಜು, ರವೀಂದ್ರ, ಶಾಮಲಾ, ದೀಪಾ ಹಾಗೂ ಇತರರು ಇದ್ದರು.