ರಾಮನಗರ: ಅತಿಥಿ ಉಪನ್ಯಾಸಕರ ಸೇವೆ ಖಾಯಂಗೊಳಿಸುವಂತೆ ಆಗ್ರಹಿಸಿ, ತರಗತಿ ಬಷ್ಕರಿಸಿ ಗುರುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು, ಅತಿಥಿ ಶಿಕ್ಷಕರು ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ರಾಜ್ಯದಲ್ಲಿರುವ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇಂದು ಬಹುತೇಕ ಅತಿಥಿ ಉಪನ್ಯಾಸಕರೇ ಹೆಚ್ಚಾಗಿ ಕರ್ತವ್ಯ ನಿರ್ವಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಅತಿಥಿ ಎಂಬ ಅನಿಷ್ಟ ಪದ್ದತಿ ಮುಕ್ತಾಯ ಮಾಡಿ ಸೇವೆ ಖಾಯಂಗೊಳಿಸಬೇಕು.
ಒಂದು ವೇಳೆ ಅತಿಥಿ ಉಪನ್ಯಾಸಕರಿಗೆ ಸೇವಾ ಖಾಯಮಾತಿ ನೀಡದಿದ್ದರೆ ಇದೇ ತಿಂಗಳು 23 ರಿಂದ ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಷ್ಕರಿಸಿ ಅನಿರ್ಧಿಷ್ಟಾವಧಿ ಹೋರಾಟವನ್ನು ಹಂತ ಹಂತವಾಗಿ ನಡೆಸಲಾಗುತ್ತದೆ.
ನೂತನ ಕಾಂಗ್ರೇಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಅತಿಥಿ ಶಿಕ್ಷಕರ ಸಮಸ್ಯೆ ಪರಿಹಾರದ ಭರವಸೆ ನೀಡಿದೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸರ್ಕಾರದ್ದ ಸಮಯದಲ್ಲಿ ನಮ್ಮ ಸಮಸ್ಯೆ ಬಗ್ಗೆ ಹೇಳಿದಾಗ ತಾವು ನಮ್ಮಪರವಾಗಿ ಧ್ವನಿ ಎತ್ತಿದ್ದೀರಿ.
ನಮ್ಮ ಸರ್ಕಾರ ಬಂದ ನಂತರ ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹರಿಸಲಾಗುತ್ತದೆೆ ಎಂದು ಆಗ ಹೇಳಿದ್ದರು. ಈಗ ಕಾಂಗ್ರೇಸ್ ಸರ್ಕಾರವೇ ಅಧಿಕಾರದಲ್ಲಿದ್ದು ಪ್ರಣಾಳಿಕೆಯಲ್ಲಿ ಹೇಳಿರುವಂತೆ ನಮಗೆ ಸೇವಾ ಭದ್ರತೆ ಕೂಡಲೇ ಒದಗಿಸಿಕೊಟ್ಟು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಖಾಯಮಾತಿ ಮಾಡಿ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಾ. ಅಂಕನಹಳ್ಳಿ ಪಾರ್ಥ, ಕುಮಾರಸ್ವಾಮಿ, ಜನಾರ್ಧನ್, ಪವಿತ್ರ, ಡಾ. ಶಿವಮ್ಮ, ಡಾ. ಅನಂತ ಕೃಷ್ಣಸ್ವಾಮಿ, ವಿನೋದ್‌ಕುಮಾರ್, ಪ್ರದೀಪ್, ನವೀನ್, ಕಾವ್ಯ, ಕುಮಾರ್, ಡಾ. ರಂಗಸ್ವಾಮಿ, ಶೃತಿ, ಜ್ಯೋತಿ ಮುಂತಾದವರಿದ್ದರು.