ಜಿಲ್ಲೆ

ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ

ಅವಿನಾಶ್ ಜೈನಹಳ್ಳಿ

ಮೈಸೂರು ವಿಶ್ವವಿದ್ಯಾಲಯ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ಮುಗಿಯುವವರೆಗೂ ಶೈಕ್ಷಣಿಕ ಅವಧಿ ಎಂದು ಪರಿಷ್ಕೃತ ವೇಳಾಪಟ್ಟಿಯ ಸುತ್ತೋಲೆ ಹೊರಡಿಸಬೇಕು. ಅಲ್ಲಿಯವರೆಗೂ ಮೌಲ್ಯಮಾಪನ ಕಾರ್ಯದಲ್ಲಿ ಅತಿಥಿ ಉಪನ್ಯಾಸಕರು ಭಾಗವಹಿಸುವುದಿಲ್ಲ ಎಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ವಿವಿ ಕ್ರಾಫರ್ಡ್ ಭವನದ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ವಿಶ್ವವಿದ್ಯಾಲಯದ ಶೈಕ್ಷಣಿಕ ವೇಳಾಪಟ್ಟಿಯ ಸುತ್ತೋಲೆಗಳ ವ್ಯತ್ಯಾಸದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

2022-23ನೇ ಶೈಕ್ಷಣಿಕ ಸಾಲಿನ ಸೆಮಿಸ್ಟರ್ ವೇಳಾಪಟ್ಟಿಯಂತೆ ಸ್ನಾತಕ ಪದವಿಗೆ ಬೋಧನ ತರಗತಿಗಳು ಜು.28ಕ್ಕೆ ಮುಕ್ತಾಯವಾಗುತ್ತವೆ. ಇದರಿಂದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಯಂತೆ ಕಾಲೇಜು ಶಿಕ್ಷಣ ಇಲಾಖೆ(ಉನ್ನತ ಶಿಕ್ಷಣ), ಅತಿಥಿ ಉಪನ್ಯಾಸಕರ ಗೌರವಧನವನ್ನು ಅಂದಿಗೇ ಕೊನೆಗೊಳಿಸಿ ಈಗಾಗಲೇ ಬಿಡುಗಡೆ ಮಾಡಿದೆ. ಆದರೆ ಪರೀಕ್ಷಾ ಕಾರ್ಯಗಳು ಮಾತ್ರ ಬಾಕಿ ಉಳಿದಿವೆ. ಇದರಿಂದ ಮೈಸೂರು ವಿವಿ ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯ ಸುತ್ತೋಲೆಯನ್ನು ಅತಿ ಶೀಘ್ರದಲ್ಲಿ ಹೊರಡಿಸಬೇಕೆಂದು ಕುಲಸಚಿವರಿಗೆ ಮನವಿ ಸಲ್ಲಿಸಿದರು.


ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡುವವರೆಗೆ ಅತಿಥಿ ಉಪನ್ಯಾಸಕರು ಎಲ್ಲ ಸ್ನಾತಕ ವಿಭಾಗಗಳಲ್ಲಿ ಮೌಲ್ಯಮಾಪನ ಕಾರ್ಯಗಳಿಗೆ ಭಾಗಿಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹನುಮಂತೇಶ್, ಉಪಾಧ್ಯಕ್ಷ ಮಹೇಶ್, ರಾಜ್ಯ ಉಪಾಧ್ಯಕ್ಷ ಡಾ.ದಿವಾಕರ, ಪದಾಧಿಕಾರಿಗಳಾದ ಮಲ್ಲಿಕಾರ್ಜುನಸ್ವಾಮಿ, ಯತೀಶ್ ಕಬ್ಬಾಳು, ವಸಂತಕುಮಾರ್, ಗುರುರಾಜು, ಡಾ.ಜಿ.ಶಾಮಲಾ, ಮಾನಸ, ಎಸ್.ಹರ್ಷಿತಾ, ಚಂದ್ರಶೇಖರ, ಬಿ.ಎಸ್.ನಾಗರಾಜ್, ಶಿವಣ್ಣ ಇತರರಿದ್ದರು.