ಹರಿಹರ: ಬಗರ್ ಹುಕುಂ ಸಮಿತಿ ಸಭೆ ನಡೆಸಿ ಸಾಗುವಳಿ ರೈತರ ಹಕ್ಕುಪತ್ರ ನೀಡಲು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆ ಮೂಲಕ ಆಗಮಿಸಿ ಗಾಂಧಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ತಾಲೂಕಿನ ಮಲೇಬೆನ್ನೂರು, ಕುಮಾರನಹಳ್ಳಿ, ಕೊಪ್ಪ, ಹಲಿವಾಣ, ಕೊಕ್ಕನೂರು ಗ್ರಾಮಗಳ ರೈತರು ಸುಮಾರು 40 ವಷರ್ಗಳಿಂದ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಇಲ್ಲಿವರೆಗೂ ಅವರಿಗೆ ಹಕ್ಕುಪತ್ರ ವಿತರಣೆ ಮಾಡದೇ ಇರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಹಕ್ಕುಪತ್ರಕ್ಕಾಗಿ 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಕೂಡಲೇ ತಾಲೂಕು ದಂಡಾಧಿಕಾರಿಗಳು ಬಗರ್ ಹುಕುಂ ಸಮಿತಿ ಸಭೆ ಕರೆದು ರೈತರು ಸಲ್ಲಿಸಿದ ಅರ್ಜಿಗೆ ಪರಿಗಣಿಸಿ ಅವರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ಮುಂದಿನ ವಾರದೊಳಗೆ ಸಭೆ ನಡೆಸಿ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು. ತಪ್ಪಿದಲ್ಲಿ ತಾಲೂಕ ಕಚೇರಿ ಮುಂದೆ ಅನಿರ್ದಿಷ್ಟ ಅವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಬಿ. ಬಸವರಾಜ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕುಮಾರನಹಳ್ಳಿ, ಕಾರ್ಯದರ್ಶಿ ಹೊನ್ನೂರ್ ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೊಗಳಿ, ಕೆ.ಜಿ. ಚಂದ್ರಶೇಖರ್, ಎಸ್.ಬಿ. ಕರಿಬಸಪ್ಪ, ಚಂದ್ರಪ್ಪ ಇತರರಿದ್ದರು.