ಜಿಲ್ಲೆ

ಸುಮೋಟೋ ಪ್ರಕರಣ ವಾಪಸ್‌ಗೆ ಆಗ್ರಹ: ಗಂಗಾಮತಸ್ಥರ ಸಂಘದಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಉಡುಪಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದಾಖಲಿಸಿರುವ ಸುಮೋಟೋ ಪ್ರಕರಣವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾ ಗಂಗಾಮತಸ್ಥರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಮೀನುಗಾರರ ಅನ್ನಕ್ಕೆ ಕೈಹಾಕಿದ ಕಳ್ಳರನ್ನು ಹಿಡಿದುಕೊಟ್ಟಂತಹ ಮಹಿಳೆಯರ ಮೇಲೆ ಕೇಸ್ ಹಾಕಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಪರ ನಡೆದ ಸಮಾಲೋಚನಾ ಸಭೆಯಲ್ಲಿ ನ್ಯಾಯಸಮ್ಮತ ತೀರ್ಮಾನಕ್ಕೆ ಆಗ್ರಹಿಸಿ ಪ್ರಮೋದ್ ಮಧ್ವರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ರೀತಿಯ ಸಂವಿಧಾನ ವಿರೋಧಿ ನಡೆಯನ್ನು ಸಮಸ್ತ ಮೀನುಗಾರ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ ಕೇಸ್ ದಾಖಲು ಮಾಡಿದ್ದೂ ಎಷ್ಟು ಸರಿ ಎಂದು ಕೇಳಿದ್ದನ್ನೇ ಪ್ರಚೋದನೆ ಮಾಡಿದ್ದಾರೆಂದು ಆರೋಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಮಟ್ಟದ ನಾಯಕನ ಮೇಲೆ ಪ್ರಕರಣ ದಾಖಲಿಸಿರುವುದು ಮೀನುಗಾರ ಸಮುದಾಯವನ್ನು ಹತ್ತಿಕ್ಕುವ ಕಾರ್ಯವಾದಂತಾಗಿದೆ. ಆದ್ದರಿಂದ ನಮ್ಮ ಹಕ್ಕು ಮತ್ತು ನಾಯಕರ ಸಮಗ್ರತೆ ರಕ್ಷಿಸಲು ಮುಂದಿನ ದಿನದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಂತೆಯೇ ಸುಮೋಟೋ ಪ್ರಕರಣ ಹಿಂಪಡೆಯದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಸ್.ರಮೇಶ್, ಬಿ.ಲಿಂಗಯ್ಯ, ಹಾಡ್ಯ ಉಮೇಶ್ ಇತರರಿದ್ದರು.