ಮಹಾಲಿಂಗಪುರ: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಏ.14ಕ್ಕೆ ಮೂರು ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಹೇಳಿದರು.
ಪಟ್ಟಣದ ಶ್ರೀ ಟೊಣಪಿನಾಥ ಕಲ್ಯಾಣಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಹೋರಾಟ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಉಸ್ತುವಾರಿ ಸಚಿವರು ತಾಲೂಕು ರಚನೆ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿರುವುದು ನಮ್ಮ ಆಸೆಗೆ ರೆಕ್ಕೆ-ಪುಕ್ಕ ಬಂದಿವೆ. ತಾಲೂಕು ರಚನೆಯ ಹೋರಾಟ ಇನ್ನು ಮುನ್ನೆಲೆಯಲ್ಲಿ ಇದೆ ಎಂಬುದು ಸರ್ಕಾರದ ಅರಿವಿಗಿರಲಿ ಎಂಬ ಉದ್ದೇಶದಿಂದ ಶಾಂತ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜಮಖಂಡಿ ಉಪವಿಭಾಗಾಧಿಕಾರಿಗಳು ಹಾಗೂ ರಬಕವಿ-ಬನಹಟ್ಟಿ ತಹಸೀಲ್ದಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಾಲೂಕು ರಚನೆಯ ಪ್ರಗತಿ ಯಾವ ಹಂತದಲ್ಲಿದೆ ಎಂದು ತಿಳಿಸಬೇಕು ಎಂದರು.
ಎಪಿಎಂಸಿಗೆ ನಾಮನಿರ್ದೇಶನಗೊಂಡ ಎಸ್.ಎಂ. ಪಾಟೀಲ ಮತ್ತು ದುಂಡಪ್ಪ ಜಾಧವ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಹೋರಾಟ ಸಮಿತಿಯ ಮಹಾದೇವ ಮೇಟಿ, ವಿರೇಶ ಆಸಂಗಿ, ನಿಂಗಪ್ಪ ಬಾಳಿಕಾಯಿ, ಸಿದ್ದು ಶಿರೋಳ, ಮಹಮ್ಮದರಫಿಕ್ ಮಾಲದಾರ, ಭೀಮಶಿ ಕರೋಶಿ, ಚನ್ನು ದೇಸಾಯಿ, ಈಶ್ವರ ಮುರಗೋಡ, ಭೀಮಶಿ ಸಸಾಲಟ್ಟಿ ಮತ್ತಿತರರಿದ್ದರು.