ಜಿಲ್ಲೆ

ತಮಿಳುನಾಡಿಗೆ ನೀರು ಹರಿಸಿದ ರಾಜ್ಯಸರ್ಕಾರ: ಆ.22ರಂದು ಹೆದ್ದಾರಿ ಸಂಚಾರಕ್ಕೆ ತಡೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯ ಸರ್ಕಾರ ತ.ನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತಸಂಘ(ಮೂಲ ಸಂಘಟನೆ) ವತಿಯಿಂದ ಆ.22ರಂದು ಬೆಳಗ್ಗೆ 10.30ರಿಂದ ಮಂಡ್ಯ ತಾಲೂಕು ಇಂಡುವಾಳು ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಲಾಗುವುದು ಎಂದು ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ ಹೇಳಿದರು.

ಅಂದು ನಡೆಯುವ ಹೆದ್ದಾರಿ ತಡೆಗೆ ಜಿಲ್ಲಾದ್ಯಂತ ರೈತರು, ಮುಖಂಡರು ಸಾರ್ವಜನಿಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ರೈತರಿಗೆ ನೀರಿಲ್ಲ. ಮಳೆ ಅಭಾವದಿಂದ ಪೂರ್ಣ ಪ್ರಮಾಣದಲ್ಲಿ ಜಲಾಶಯ ತುಂಬದಿದ್ದರೂ ಬೆಳೆಗೆ ನೀರಿನ ಕೊರತೆಯಾಗುವುದಿಲ್ಲ. ಈಗಿದ್ದರೂ ರಾಜ್ಯ ಸರ್ಕಾರ ಸಲ್ಲದ ನೆಪಮಾತ್ರ ಮೀಟಿಂ ಮಾಡಿ ಕಟ್ಟುಪದ್ಧತಿಯಲ್ಲಿ ನೀರು ಬಿಡಲು ತೀರ್ಮಾನ ಮಾಡಿರುವುದು ವಿಪರ್ಯಾಸ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಈ ಬಾರಿಯ ಮುಂಗಾರು ಬೆಳೆಗೆ ಈ ಕಟ್ಟುಪದ್ಧತಿ ನೀರಿನಿಂದ ಯಾವುದೇ ಪ್ರಯೋಜನವಿಲ್ಲ. ಒಂದೆಡೆ ಭತ್ತದ ಸಸಿಮಾಡಿ ಒಣಗುತ್ತಿದ್ದರೆ, ಬೆಳೆದು ನಿಂತಿರುವ ಕಬ್ಬು, ತೆಂಗು, ರೇಷ್ಮೆ ಇಳುವರಿಯಲ್ಲಿ ಕುಂಠಿತವಾಗುತ್ತಿದೆ. ನೀರಿಲ್ಲದೆ ಒಣಗುತ್ತಿರುವ ಕೆರೆಕಟ್ಟೆ ಕುಂಟೆಗಳಲ್ಲಿ ನೀರು ತುಂಬಿಸುವ ಕಾರ್ಯ ಪ್ರಗತಿಯಾಗಿಲ್ಲ. ಇಂತಹ ಘೋರ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿರುವಾಗ ಇದಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ತ.ನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ. ಅಲ್ಲಿಗೆ ನೀರು ಹರಿಸಿದರೆ ಜಿಲ್ಲೆಯ ರೈತರಿಗೆ ನೀರು ಎಲ್ಲಿಂದ ಸಿಗುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಸುಪ್ರೀಂಕೋರ್ಟ್ ಭೂತ ತೋರಿಸಿ ತಮಿಳುನಾಡಿಗೆ ಸುಮಾರು 13 ಸಾವಿರ ಕ್ಯೂಸೆಕ್ ನೀರು ದಿನಗಟ್ಟಲೆ ಬಿಡುತ್ತಿರುವ ರಾಜ್ಯ ಸರ್ಕಾರದ ನಿಲುವು ಮಲತಾಯಿ ಧೋರಣೆಯಾಗಿದೆ. ಈಗಾಗಲೇ ಕಾವೇರಿ ಜಲಾಶಯ ಅಣೆಕಟ್ಟುಗಳಿಂದ ವಾಡಿಕೆ ಅಥವಾ ಕಾವೇರಿ ಜಲನ್ಯಾಯ ಮಂಡಳಿ ಆದೇಶದ ರೀತಿಯಂತೆ ಸುಮಾರು 32 ಟಿಎಂಸಿ 1.80 ಲಕ್ಷ ಎಕರೆ ಕುರುವೈ ಬೆಳೆಗೆ ಒಂದು ವರ್ಷದ ಅವಧಿಗೆ ಸಾಕಾಗುವಷ್ಟು ನೀರಿದ್ದರೂ ತ. ಸರ್ಕಾರ ನೀರಿನ ದುರ್ಬಳಕೆ ಮಾಡಿಕೊಂಡು ತೀರ್ಪಿನ ಉಲ್ಲಂಘನೆ ಮಾಡಿದೆ ಎಂದು ದೂರಿದರು.

ಈಗಾಗಲೇ ಮೆಟ್ಟೂರು ಜಲಾಶಯಕ್ಕೆ ಸುಮಾರು 63 ಟಿಎಂಸಿ ನೀರು ಹರಿದಿದ್ದರೂ ಇದನ್ನು ನ್ಯಾಯಾಲಯಕೆಕ ಮನವರಿಕೆ ಮಾಡದ ರಾಜ್ಯ ಸರ್ಕಾರ ಜಿಲ್ಲೆಯ ಜನರಿಗೆ ನೀರಿನ ವಿಚಾರದಲ್ಲಿ ಮೋಸ ಮಾಡುತ್ತಲೇ ಬಂದಿದೆ. ಸುಮಾರು 3 ಲಕ್ಷ ಎಕರೆ ಪ್ರದೇಶ ರೈತರ ಬೆಳೆಗಳನ್ನು ಹೊಂದಿರುವ ಜಿಲ್ಲೆಯ ರೈತರ ಹಿತ ಕಾಪಾಡುವಲ್ಲಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳು ರಾಜಕೀಯ ಪ್ರತಿಷ್ಠೆಗಾಗಿ ಹೋರಾಟ ಮಾಡಿ ಜಿಲ್ಲೆಯ ರೈತರ ಹಿತ ಕಡೆಗಣಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಗೌರವಾಧ್ಯಕ್ಷ ಬೋರಾಪುರ ಶಂಕರೇಗೌಡ, ಎಚ್.ಜಿ.ಪ್ರಭುಲಿಂಗು, ಕೆ.ರಾಮಲಿಂಗೇಗೌಡ, ಬೋರಲಿಂಗೇಗೌಡ ಇದ್ದರು.