ಜಿಲ್ಲೆ

ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

ರಾಜಣ್ಣ

ಮದ್ದೂರು: ಶಿಂಷಾ ಎಡ ಮತ್ತು ಬಲ ದಂಡೆ ನಾಲೆಗಳಿಗೆ ಕೆಆರ್‌ಎಸ್ ಜಲಾಶಯದಿಂದ ಈ ಕೂಡಲೇ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.


ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ಕೆ.ರಾಮಕೃಷ್ಣ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಕೆಲ ಕಾಲ ಧರಣಿ ನಡೆಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೆಆರ್‌ಎಸ್ ಜಲಾಶಯದಿಂದ ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.


ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ಬೆಳೆದಿರುವ ಗಿಡ ಗಂಟಿಗಳು ಹಾಗೂ ಹೂಳನ್ನು ಶೀಘ್ರವಾಗಿ ತೆಗೆಸುವ ಮೂಲಕ ನಾಲೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಒಂದು ಕಟ್ಟು ನೀರನ್ನು ಮಾತ್ರ ನಾಲೆಗಳ ಮೂಲಕ ಹರಿಯಲು ಬಿಟ್ಟಿದ್ದಾರೆ. ಆ ನಂತರ ನೀರು ಬಿಡದೆ ಇರುವುದರಿಂದ ಹಾಲಿ ಇರುವ ಬೆಳೆಗಳು ಒಣಗುವ ಹಂತಕ್ಕೆ ಬಂದಿದೆ ಎಂದು ಧರಣಿ ನಿರತ ರೈತರು ಆರೋಪಿಸಿದರು.
ಶಿಂಷಾ ಅಣೆಗೆ ವಿಶ್ವೇಶ್ವರಯ್ಯ ನಾಲೆ ಮುಖಾಂತರ ಕೊಪ್ಪ ಕೆರೆ ಭರ್ತಿ ಮಾಡಬೇಕು. ಅಲ್ಲಿಂದ ಶಿಂಷಾ ನದಿಗೆ ನೀರು ಬಿಡುಗಡೆ ಮಾಡುವುದು ಮತ್ತು ನಾಲಾ ವ್ಯಾಪ್ತಿಯ ಎಲ್ಲ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು. ಶಿಂಷಾ ಎಡ ಮತ್ತು ಬಲ ದಂಡ ನಾಲೆಗಳಲ್ಲಿ ಬೆಳೆದು ನಿಂತಿರುವ ಗಿಡ ಗಂಟಿಗಳನ್ನು ತೆರವುಗೊಳಿಸಿ ಹೂಳು ತೆಗೆಯಬೇಕು ಹಾಗೂ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜಮೀನುಗಳಿಗೆ ಅಗತ್ಯವಾದ ಸಂದರ್ಭದಲ್ಲಿ ನೀರು ಹರಿಸಿ ಬೆಳೆ ರಕ್ಷಣೆಗೆ ಆದ್ಯತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ರೈತ ಮುಖಂಡರು ಜಲ ಸಂಪನ್ಮೂಲ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.


ರೈತರ ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇ ನಾಗರಾಜು ಧರಣಿ ನಿರತ ರೈತರೊಂದಿಗೆ ಮಾತುಕತೆ ನಡೆಸಿದರು. ಶಿಂಷಾ ಎಡ ಮತ್ತು ಬಲ ದಂಡೆ ನಾಲೆಗಳಿಗೆ ಕೆಆರ್‌ಎಸ್ ಜಲಾಶಯದ ಮೂಲಕ ನೀರು ಹರಿಸುವ ಬಗ್ಗೆ ನಿಗಮದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು. ನಂತರ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದ ರೈತ ಮುಖಂಡರು ವರುಣನ ಕೃಪೆಯಿಂದ ಈ ಬಾರಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದರೂ ಕೆರೆ, ಕಟ್ಟೆಗಳಿಗೆ ನೀರು ಹರಿಸಿ ಭರ್ತಿ ಮಾಡುವುದನ್ನು ಬಿಟ್ಟು ತಮಿಳುನಾಡಿಗೆ ಅಗತ್ಯವಿಲ್ಲದಿದ್ದರೂ ನೀರು ಹರಿಸಲಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಮೊದಲು ಕೆಆರ್‌ಎಸ್ ಜಲಾಶಯವ ವ್ಯಾಪ್ತಿಯ ರೈತರ ಹಿತ ರಕ್ಷಣೆಗೆ ಮುಂದಾಗಬೇಕು. ಇಲ್ಲವಾದ್ದಲ್ಲಿ, ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬೋರಾಪುರ ಶಂಕರೇಗೌಡ, ವಿನೋದ್‌ಬಾಬು, ಎಂ.ಎಸ್.ಸಿದ್ದೇಗೌಡ, ಶೆಟ್ಟಹಳ್ಳಿ ರವಿಕುಮಾರ್, ಸಾದೊಳಲು ಸಿದ್ದೇಗೌಡ, ವರದರಾಜು, ಎಚ್.ಎಂ.ಶಿವರಾಮು, ಬಿ.ಕೆ.ಸತೀಶ್, ರಾಮಕೃಷ್ಣ ಮತ್ತಿತರರಿದ್ದರು.