ಕೊಳ್ಳೇಗಾಲ: ರೈತ ಸಂಘದ ಮುಖಂಡ ಮೋಳೆ ದಿ.ಶಿವರಾಂ ನಿವೇಶನದಲ್ಲಿದ್ದ ಶೆಡ್ ಜಖಂಗೊಳಿಸಿದಲ್ಲದೆ, ಪಟ್ಟಣ ಪಿಎಸ್‌ಐ ಅವರಿಗೆ ಧಮ್ಕಿ ಹಾಕಿರುವ 10ನೇ ವಾರ್ಡ್‌ನ ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್‌ರನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಪದಾಧಿಕಾರಿಗಳು ಶುಕ್ರವಾರ ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ನಗರಸಭೆ ಸದಸ್ಯ ಜಿ.ಪಿ. ಶಿವಕುಮಾರ್ ರೈತ ಮುಖಂಡರಿಗೆ ಸೇರಿದ ಶೆಡ್ ಮೇಲೆ ಅಕ್ರಮವಾಗಿ ಜೆಸಿಬಿ ಬಳಸಿಕೊಂಡು ಹಾನಿ ಮಾಡಿದ್ದಾರೆ. ನೊಂದವರ ದೂರಿನ ಆಧಾರದ ಮೇಲೆ ರಕ್ಷಣೆ ಆಗಮಿಸಿದ ಪಿಎಸ್‌ಐ ಮೇಲೆ ದರ್ಪ ತೋರಿದ್ದಾರೆ. ರಸ್ತೆ ಅಭಿವೃದ್ಧಿ ನೆಪದಲ್ಲಿ ಕೋರ್ಟ್ ತಡೆಯಾಜ್ಞೆಯಿರುವ ಸ್ಥಳದಲ್ಲಿರುವ ಸಾರ್ವಜನಿಕರ ಶೆಡ್ ತೆರವು ಮಾಡಲು ಮುಂದಾಗಿದ್ದಾರೆ. ಗೂಂಡಾ ವರ್ತನೆ ತೋರಿದ್ದಾರೆ. ಈ ಕೂಡಲೇ ನಗರಸಭೆ ಸದಸ್ಯನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಗಮನಕ್ಕೆ ಬಂದಿಲ್ಲ, ಶಾಸಕರಿಗೂ ಸಂಬಂಧವಿಲ್ಲ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಸಭಾಧ್ಯಕ್ಷೆ ರೇಖಾ ಮಾತನಾಡಿ, ಜಿ.ಪಿ. ಶಿವಕುಮಾರ್ ರಸ್ತೆ ಅಭಿವೃದ್ಧಿ ಶೆಡ್ ತೆರವು ಮಾಡಲು ಹೋಗಿರುವ ಮಾಹಿತಿ ನಗರಸಭೆಗಿಲ್ಲ. ಶಾಸಕರಿಗೂ ಇಲ್ಲ. ನಗರಸಭೆ ಸದಸ್ಯರಾಗಿ ಈ ರೀತಿ ನಡೆದುಕೊಳ್ಳುವುದು ತಪ್ಪು. ಈ ಬಗ್ಗೆ ಶಾಸಕರ ಜತೆ ಚರ್ಚಿಸಿ ನಂತರ ಕ್ರಮವಹಿಸುತ್ತೇವೆ ಎಂದರು.
ನಗರಸಭೆ ಪೌರಾಯುಕ್ತ ಮಾತನಾಡಿ, ಶಿವರಾಂ ಅವರು ಶೆಡ್ ನಿರ್ಮಿಸಿದ ನಿವೇಶನ ತೆರವಿಗೆ ಕೋರ್ಟ್ ತಡೆಯಾಜ್ಞೆ ಇದೆ ಎಂಬ ವಿಚಾರವಾಗಿ 2 ಬಾರಿ ಪರಿಶೀಲಿಸಿದ್ದೇವೆ. ರಸ್ತೆ ನಿರ್ಮಾಣ ವಿಚಾರವೂ ಮುನ್ನೆಲೆಯಲ್ಲಿದೆ. ಯಾವ ಸ್ಥಳದಲ್ಲಿ ರಸ್ತೆ ಮಾಡಬೇಕೆಂಬುದಕ್ಕೆ ನಕ್ಷೆಯನ್ನು ಪರಿಶೀಲಿಸಿ ಕ್ರಮವಹಿಸುತ್ತೇವೆ. ಸದ್ಯಕ್ಕೆ ಆ ಸ್ಥಳದಲ್ಲಿ ಕಾಮಗಾರಿ ನಡೆಸುವುದಿಲ್ಲ. ಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇವೆ. ಸ್ಥಳ ಮಾಹಿತಿ ವರದಿಯನ್ನು ಪೊಲೀಸ್ ಠಾಣೆಗೆ ನೀಡುತ್ತೇವೆ ಎಂದು ತಿಳಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಸರ್ಕಾರಿ ಅಭಿವೃದ್ಧಿ ಕೆಲಸ ಮಾಡುವಾಗ ಜನಪ್ರತಿನಿಧಿಯಾಗಿ ದೌರ್ಜನ್ಯ ನಡೆಸಿ ಕೆಲಸ ಮಾಡಿಸುವುದು ತಪ್ಪು. ಅವರ ಬಂಧನ ಆಗಬೇಕು ಎಂದು ಪಟ್ಟು ಹಿಡಿದರು.
ಶಾಸಕರು ಮಧ್ಯ ಪ್ರವೇಶಿಸಲಿ: ಮುಖಂಡರಾದ ಉಪ್ಪಾರ ಸೋಮಣ್ಣ, ದಿಲೀಪ್ ಸಿದ್ದಪ್ಪಾಜಿ ಮಾತನಾಡಿ, ದಿ.ಶಿವರಾಂ ಆಸ್ತಿಯನ್ನು ನಷ್ಟಗೊಳಿಸಿದ್ದಲ್ಲದೆ, ಇದನ್ನು ಪ್ರಶ್ನಿಸಿದ ಪಟ್ಟಣ ಪಿಎಸ್‌ಐ ವರ್ಷಾ ಅವರಿಗೆ ಧಮ್ಕಿ ಹಾಕಿದ ನಗರಸಭೆ ಸದಸ್ಯನ ನಡವಳಿಕೆ ಖಂಡನೀಯ. ಸಾರ್ವಜನಿಕರಿಗೆ ಸೇರಿದ ಆಸ್ತಿ ಮೇಲೆ ಹಾನಿ ಮಾಡಿದ್ದಲ್ಲದೆ ಶಾಸಕರ ಹೆಸರು ಬಳಸಿಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ. ಶಾಸಕರೇ ನನಗೆ ಹೇಳಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಧ್ಯಪ್ರವೇಶಿಸಿ ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಬಂಧಿಸುವಂತೆ ಆಗ್ರಹ: ಈಗಾಗಲೇ ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೂ ಬಂಧನವಾಗಿಲ್ಲ. ಸಾಮಾನ್ಯ ಜನರಾಗಿದ್ದರೆ ಈಗಾಗಲೇ ಜೈಲು ಸೇರುತ್ತಿದ್ದರು. ಶಿವಕುಮಾರ್‌ರನ್ನು ಕೂಡಲೇ ಬಂಧಿಸದಿದ್ದರೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟಿಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಪಿಎಸ್‌ಐ ವರ್ಷಾ ಮಾತನಾಡಿ, ಈಗಾಗಲೇ ಘಟನಾ ಸ್ಥಳಕ್ಕೆ ತೆರಳಿ ಮಹಜರ್ ಪ್ರಕ್ರಿಯೆ ನಡೆಸಿದ್ದೇನೆ. ಆರೋಪಿ ಮೇಲೆ ಎಫ್‌ಐಆರ್ ದಾಖಲಾಗಿದೆ. ದೌರ್ಜನ್ಯ ನಡೆದ ಸ್ಥಳದ ಮಾಹಿತಿ ಹಾಗೂ ದಾಖಲಾತಿಗಳನ್ನು ನಗರಸಭೆ ಪೊಲೀಸ್ ಇಲಾಖೆ ನೀಡಲಿದೆ. ಬಳಿಕ ಜಿ.ಪಿ ಶಿವಕುಮಾರ್‌ಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುತ್ತೇನೆ. ಬಾರದಿದ್ದರೆ ಮುಲಾಜಿಲ್ಲದೆ ಕಾನೂನು ಕ್ರಮಹಿಸುತ್ತೇನೆ ಎಂದರು.
ಮೂರು ದಿನಗೊಳಗಾಗಿ ನಗರಸಭೆ ಸದಸ್ಯನನ್ನು ಬಂಧಿಸಬೇಕು. ವಾರದೊಳಗೆ ಸಮಸ್ಯೆಯನ್ನು ನಗರಸಭೆ ಅಧಿಕಾರಿಗಳು ಶಾಸಕರ ಸಮ್ಮುಖದಲ್ಲಿ ಬಗೆಹರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟರು.
ರಾಜ್ಯ ರೈತ ಸಂಘದ ಕಾಯಂ ಸದಸ್ಯರಾದ ಹೆಬ್ಬಸೂರು ಬಸವಣ್ಣ, ಸಿದ್ದರಾಜು, ಮಹೇಶ್ ಕುಮಾರ್, ಮುಖಂಡ ಮಹದೇವ ಪ್ರಸಾದ್, ಲೋಕೇಶ್, ಮಹೇಶ್, ಕೀರ್ತಿ, ಭಾಸ್ಕರ್, ರಾಜಣ್ಣ ಮತ್ತಿತರಿದ್ದರು.