ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಮದ್ದೂರು ತಾಲೂಕಿನ ಕೊಪ್ಪದಲ್ಲಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಕೀಳಘಟ್ಟ ನಂಜುಂಡಯ್ಯ, ವರದಪ್ಪ, ಲಿಂಗರಾಜು, ರಾಮೇಗೌಡ, ಉಮೇಶ್, ರಾಜೇಶ್, ವೆಂಕಟೇಶ್, ಶಿವಲಿಂಗಯ್ಯ, ಅಪ್ಪಾಜಿ ಇದ್ದರು. 
ಜಿಲ್ಲೆ

ಕೊಪ್ಪದಲ್ಲಿ ರೈತ ಸಂಘದಿಂದ ಪ್ರತಿಭಟನೆ

ಲೋಕೇಶ್ ಮನು. ಡಿ

ಮದ್ದೂರು: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ತಾಲೂಕಿನ ಕೊಪ್ಪದಲ್ಲಿ ರಾಜ್ಯ ರೈತ ಸಂಘದಿಂದ ಗುರುವಾರ ಪ್ರತಿಭಟನೆ ನಡೆಯಿತು.

ಕೊಪ್ಪದ ಬಸ್ ನಿಲ್ದಾಣದ ಬಳಿ ಆಗಮಿಸಿದ ರೈತ ಸಂಘದ ಕಾರ್ಯಕರ್ತರು, ಮದ್ದೂರು ನಾಗಮಂಗಲ ರಸ್ತೆಯ ಸಂಚಾರ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಸರ್ಕಾರ ಟನ್ ಕಬ್ಬಿಗೆ 3,500 ರೂ. ನೀಡುವಂತೆ ಬೆಳಗಾವಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಕಬ್ಬು ಬೆಳೆಗಾರರ ಹಿತ ದೃಷ್ಟಿಯಿಂದ ಈ ಕೂಡಲೇ ಸರ್ಕಾರ ಟನ್ ಕಬ್ಬಿಗೆ 3,500 ರೂ. ಘೋಷಣೆ ಮಾಡಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಒಂದು ಟನ್ ಕಬ್ಬಿನಿಂದ ಸಕ್ಕರೆ ಸೇರಿದಂತೆ ಉಪ ಉತ್ಪನ್ನದಿಂದ ಅಂದಾಜು 14,120 ರೂ.ಗಳನ್ನು ಕಾರ್ಖಾನೆಯವರಿಗೆ ಸಿಗುತ್ತದೆ ಇದರಲ್ಲಿ ಕಬ್ಬು ಹಾಗೂ ಇತರ ಖರ್ಚು 5 ಸಾವಿರ ಕಳೆದರೆ ಸುಮಾರು 8,500 ರೂ. ಲಾಭ ಸಿಗುತ್ತದೆ. ಈ ಹಣದಲ್ಲಿ 3,500 ರೂ. ರೈತರಿಗೆ ನೀಡಿದರೆ ಕಾರ್ಖಾನೆಗಳಿಗೆ ಯಾವುದೇ ನಷ್ಟವಿಲ್ಲ ಎಂದರು.

ರೈತರ ಬೇಡಿಕೆ ಈಡೇರಿಸದಿದ್ದರೆ ಶುಕ್ರವಾರ ಬೆಸಗರಹಳ್ಳಿಯಲ್ಲಿ, ಶನಿವಾರ ಮದ್ದೂರಿನಲ್ಲಿ ಹೆದ್ದಾರಿ ಸಂಚಾರ ತಡೆದು ಸರ್ಕಾರದ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಮುಖಂಡರಾದ ವರದಪ್ಪ, ಲಿಂಗರಾಜು, ರಾಮೇಗೌಡ, ಉಮೇಶ್, ರಾಜೇಶ್, ವೆಂಕಟೇಶ್, ಶಿವಲಿಂಗಯ್ಯ, ಅಪ್ಪಾಜಿ ಸೇರಿದಂತೆ ಇತರರು ಇದ್ದರು.