ಜಿಲ್ಲೆ

ಸಚಿವ ಸಂಪುಟದಿಂದ ಅಮಿತ್ ಷಾ ವಜಾಗೊಳಿಸಲಿ: ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು, ಕೇಂದ್ರ ಸಚಿವ ಅಮಿತ್ ಷಾ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಅಮಿತ್ ಷಾ ಸಂಸತ್‌ನಲ್ಲಿ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಬಹಿರಂಗವಾಗಿ ಹೇಳಿದ್ದಾರೆ. ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿರುವುದು ದೇಶದ್ರೋಹದ ಕೆಲಸ. ದೇಶದ ಆಸ್ತಿಯಾದ ಅಂಬೇಡ್ಕರ್ ಅವರು ಸರ್ವ ಸಮಾಜಕ್ಕೂ ಸಾಮಾಜಿಕ ನ್ಯಾಯ ಸಿಗುವ ರೀತಿಯ ಸಂವಿಧಾನ ರಚಿಸಿದ್ದು, ಇದರಿಂದ ಮೇಲ್ವರ್ಗದಿಂದ ತಳವರ್ಗದವರೆಗೂ ಎಲ್ಲ ಕ್ಷೇತ್ರದಲ್ಲಿ ಸಮಾನ ಅವಕಾಶ ಸಿಕ್ಕಿದೆ. ಇದನ್ನು ಅರಿಯದ ಅಮಿತ್ ಷಾ ಅವಹೇಳನ ಮಾಡಿರುವುದು ತಲೆ ತಗ್ಗಿಸುವ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರು ಕೂಡ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಇದೇ ರೀತಿಯ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಅವರ ಹಿಂಬಾಲಕ ಅಮಿತ್ ಷಾ ಇದೀಗ ಅಂಬೇಡ್ಕರ್ ಹೆಸರು ಹೇಳುವುದನ್ನು ಫ್ಯಾಷನ್ ಎಂದು ಕರೆಯುವ ಮೂಲಕ ಆರ್‌ಎಸ್‌ಎಸ್‌ನ ಅಸಹನೆಯನ್ನು ಹೊರ ಹಾಕಿದ್ದಾರೆ. ಕೂಡಲೇ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಅಮಿತ್ ಷಾ ಸಚಿವ ಸ್ಥಾನ ಹಾಗೂ ಲೋಕಸಭಾ ಸದಸ್ಯತ್ವದಿಂದ ವಜಾಗೊಳಿಸಬೇಕು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅಸಂಬದ್ಧ ಬಳಕೆ ಮಾಡಿರುವ ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಚಿದಂಬರ್, ಸಿ.ಎಂ.ದ್ಯಾವಪ್ಪ, ಅಂಜನಾ ಶ್ರೀಕಾಂತ್, ವಿಜಯಲಕ್ಷ್ಮೀ ರಘುನಂದನ್, ವಿಜಯ್‌ಕುಮಾರ್ ಚಂದಗಾಲು, ಸುರೇಶ್ ಕಂಠಿ, ತಗ್ಗಳ್ಳಿ ಯಶೋದಾ, ಎಂ.ಎಲ್.ಸುರೇಶ್, ಶ್ರೀಧರ್, ದೀಪಕ್, ದೇವರಾಜು, ಪ್ರಕಾಶ್, ಶಕುಂತಲಾ ಇತರರಿದ್ದರು.