ಮೈಸೂರು: ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಕುರಿತು ಕೆಲ ನಿಯಮಾವಳಿಗಳ ಬದಲಾವಣೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಸಿದ್ಧಾರ್ಥನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ಅನ್ವಯಿಸಿ ರಾಜ್ಯ ಸರ್ಕಾರವು ಆದೇಶ ನೀಡಿರುವುದು ಸ್ವಾಗತಾರ್ಹ. ಆದರೆ, ಸುತ್ತೋಲೆ 1ನೇ ಮತ್ತು 6ನೇ ಷರತ್ತುಗಳು ಈ ಆದೇಶದ ಸದುದ್ದೇಶದ ಆಶಯಗಳಿಗೆ ವಿರುದ್ಧವಾಗಿದೆ. 1ನೇ ಷರತ್ತಿನಲ್ಲಿ ಹೊರಗುತ್ತಿಗೆ ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ ಎಂದಿದೆ. ಇದು ಮೀಸಲಾತಿ ವಿರೋಧಿಗಳಿಗೆ ಅನುಕೂಲವಾಗಿದೆ. ಇದನ್ನು ರದ್ದುಪಡಿಸಿ ಎಷ್ಟೇ ಅವಧಿಯ ನೇಮಕಾತಿ ಮಾಡಿಕೊಂಡರೂ ಮೀಸಲಾತಿ ನಿಯಮವನ್ನು ಕಡ್ಡಾಯಗೊಳಿಸಬೇಕು ಎಂದರು.
6ನೇ ಷರತ್ತಿನಲ್ಲಿ ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸತಕ್ಕದ್ದು ಎಂದಿದೆ. ಇದು ಅವೈಜ್ಞಾನಿಕ. ಮೀಸಲಾತಿ ವಂಚಿಸುವವರಿಗೆ ಈ ನಿಬಂಧನೆ ಸಹಕಾರಿಯಾಗಲಿದೆ ಎಂದು ಆರೋಪಿಸಿದರು.
20ಕ್ಕೂ ಹೆಚ್ಚಿನ ಸಂಖ್ಯೆಯ ನೇಮಕಾತಿಗಳಿದ್ದಾಗ ಮಾತ್ರ ಮೀಸಲಾತಿ ನೀತಿ ಅನ್ವಯಿಸಲಿದೆ ಎಂದು ಸರ್ಕಾರವೇ ನಿರ್ಬಂಧ ಹಾಕಿದರೆ, ಎಲ್ಲ ನೇಮಕಾತಿಗಳಲ್ಲಿ ಮೀಸಲಾತಿ ವಂಚಕರಿಗೆ ಇದು ರತ್ನಗಂಬಳಿ ಹಾಸಿ ರಹದಾರಿ ಕಲ್ಪಿಸಿ ಕೊಟ್ಟಂತಾಗಲಿದೆ. ಈವರೆಗಿನ ನೇಮಕಾತಿ ಪ್ರಕ್ರಿಯೆಗಳನ್ನು ಅವಲೋಕನ ಮಾಡಿದರೆ ಮೀಸಲಾತಿ ವಿರೋಧಿ ದುರಾಡಳಿತಕ್ಕೆ ಸಾಕಷ್ಟು ಪುರಾವೆಗಳು ಸಿಗಲಿವೆ. ಸಮಾಜದಲ್ಲಿ ಮೀಸಲಾತಿ ಬಗ್ಗೆ ಅಸಹನೆ ತುಂಬಿರುವ ಹೊತ್ತಿನಲ್ಲಿ ಇಂತಹ ಷರತ್ತು ಒಳಗೊಂಡಿರುವ ಆದೇಶವು, ನೇಮಕಾತಿ ಮಾಡುವ ವೇಳೆ ಪಕ್ಷಪಾತ ಮಾಡುವ ಜಾತಿವಾದಿ ಅಧಿಕಾರಿಗಳಿಗೆ ಕಾನೂನು ಬದ್ಧ ಪ್ರೋತ್ಸಾಹ ನೀಡಿದಂತಾಗಲಿದೆ ಎಂದರು.
1 ಮತ್ತು 6ನೇ ಷರತ್ತನ್ನು ರದ್ದುಪಡಿಸಿ ರೋಸ್ಟರ್ ನಿಯಮಗಳ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯಗೊಳಿಸಬೇಕು. ಆದೇಶ ಮಾರ್ಪಾಡು ಮಾಡಿ, ಮರು ಸುತ್ತೋಲೆ ಹೊರಡಿಸಲು ಕ್ರಮ ಕೈಗೊಳ್ಳಬೇಕು. ಕ್ರಮ ವಹಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಮುಖಂಡರಾದ ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು, ಜಿ.ಡಿ.ಶಿವಬುದ್ಧಿ, ಆರ್.ಸೋಮಣ್ಣ ಕುಪ್ಪೇಗಾಲ, ಉಯ್ಯಂಬಳ್ಳಿ ದಾಸಯ್ಯ, ರಜನಿ, ಶಿವಶಂಕರ, ತಿಮ್ಮೇಗೌಡ, ಶಿವು, ಶಿವಸ್ವಾಮಿ ಇನ್ನಿತರರು ಪಾಲ್ಗೊಂಡಿದ್ದರು.