ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ ಜೆಡಿಎಸ್‌ನಿಂದ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿ ಮಂಗಳವಾರ ಕಾಂಗ್ರೆಸ್‌ನಿಂದ ನಗರದಲ್ಲಿ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಮುಖಂಡರು ಮತ್ತು ಕಾರ್ಯಕರ್ತರು ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ರಾಜ್ಯಪಾಲರಿಗೆ ಸುಳ್ಳು ದೂರು ನೀಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಚಲುವರಾಯಸ್ವಾಮಿ ಜನಪ್ರಿಯತೆ ಸಹಿಸದ ಕುತಂತ್ರಿಗಳು, ಜಿಲ್ಲೆಯ ಸ್ವಾಭಿಮಾನಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಧಿಕ್ಕಾರದ ಘೋಷಣೆ ಕೂಗಿದರು
ಸಚಿವರ ವಿರುದ್ಧ ಮಂಡ್ಯ ಜಿಲ್ಲೆಯ ಏಳು ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ನಕಲಿ ಸಹಿ ಬಳಸಿ ಇಲ್ಲಸಲ್ಲದ ಆರೋಪಗಳನ್ನು ಸೃಷ್ಟಿಸಿ ರಾಜ್ಯಪಾಲರಿಗೆ ದೂರು ನೀಡಿರುವುದು ವ್ಯವಸ್ಥಿತ ಕುತಂತ್ರವಾಗಿದೆ. ಈ ಮೂಲಕ ಸಚಿವರು ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಕಳಂಕ ತರಲು ಕಿಡಿಗೇಡಿಗಳು ಸೃಷ್ಟಿಸಿರುವ ನಕಲಿ ಪತ್ರವಾಗಿದೆ. ದೂರು ಪತ್ರದಲ್ಲಿ ಬರೆದಿರುವಂತೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಸರಿನಲ್ಲಿರುವ ಕೆಲ ಅಧಿಕಾರಿಗಳು ಆ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಇದರ ಹಿಂದೆ ರಾಜಕೀಯ ಹುನ್ನಾರವಿದ್ದು, ಚುನಾಯಿತ ಜನಪ್ರತಿನಿಧಿಗಳ ಮೇಲೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದೂರು ಸಲ್ಲಿಸಿ ಬ್ಲಾಕ್ ಮೇಲ್ ತಂತ್ರ ಬಳಸುವ ಮೂಲಕ ಬೆದರಿಸುವ ಬಹುದೊಡ್ಡ ಹುನ್ನಾರವಾಗಿದೆ. ಇದರ ಹಿಂದೆ ದೊಡ್ಡ ಚಾಲವೇ ಅಡಗಿದೆ. ಇಂತಹವರನ್ನು ಪತ್ತೆಹಚ್ಚಿ ಬಗ್ಗು ಬಡಿಯದಿದ್ದರೆ ಜನಪ್ರತಿನಿಧಿ ಮತ್ತು ದಕ್ಷ ಅಧಿಕಾರಿಗಳಿಗೆ ನಿರ್ಭೀತಿಯಿಂದ ಸಾರ್ವಜನಿಕರ ಸೇವೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಶಾಸಕರಾದ ಎಚ್.ಪಿ.ರಾಮು, ಕೆ.ಬಿ.ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಉಪಾಧ್ಯಕ್ಷ ಹಾಲಹಳ್ಳಿ ಅಶೋಕ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಭಾರತ್ ಜೋಡೋ ಜಿಲ್ಲಾ ಸಮಿತಿ ಸದಸ್ಯ ವಿಜಯ ರಾಮೇಗೌಡ, ಜಿಪಂ ಮಾಜಿ ಸದಸ್ಯ ಬಿ.ಎಲ್.ದೇವರಾಜು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಕೃಷ್ಣ, ಮುಖಂಡರಾದ ಕೀಲಾರ ರಾಧಾಕೃಷ್ಣ, ಟಿ.ಎಸ್.ಸತ್ಯಾನಂದ, ಸಿ.ಎಂ.ದ್ಯಾವಪ್ಪ ಇತರರಿದ್ದರು.