ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಂದ್ರ ಬಜೆಟ್‌ನಲ್ಲಿ ಇಂಡಿಯಾ ಒಕ್ಕೂಟದ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಽಕಾರಿ ಕಚೇರಿ ಎದುರು ಗುರುವಾರ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಬರ್ಟ್ ದದ್ದಾಪುರಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಮೀಸಲಿಡದೆ ತಾರತಮ್ಯ ಮಾಡುತ್ತಿದೆ. ಎನ್‌ಡಿಎ ಮಿತ್ರಪಕ್ಷಗಳಿಗೆ ಗಣನೀಯವಾಗಿ ಹಣವನ್ನು ನೀಡುತ್ತಿದ್ದು, ಇಂಡಿಯಾ ಒಕ್ಕೂಟದ ರಾಜ್ಯಗಳಿಗೆ ನ್ಯಾಯುತವಾಗಿ ಹಣ ನೀಡದೇ ಅನ್ಯಾಯ ಮಾಡುತ್ತಿದೆ. ಮುಖ್ಯವಾಗಿ ಕರ್ನಾಟಕದ ಮೇಕೆದಾಟು ಸಮಾನಾಂತರ ಅಣೆಕಟ್ಟು ಯೋಜನೆಗೆ ಹಣ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ, ಕಳಸಾ- ಬಂಡೂರಿ ಕುಡಿಯುವ ನೀರಿನ ಯೋಜನೆ, ಬೆಂಗಳೂರಿನ 60 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ, ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಮೆಟ್ರೋ ಮಾರ್ಗ ವಿಸ್ತರಣೆ, ಬೆಂಗಳೂರಿನ ಹೆಬ್ಬಾಳ ಸರ್ಜಾಪೂರ ಕಾರಿಡಾರ್ ಯೋಜನೆ, 3ನೇ ಹಂತದ ಮೆಟ್ರೋ ಯೋಜನೆಗೂ ಖಾಲಿ ಚೊಂಬು ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಷ್ಟçಪತಿಗಳು ಮಧ್ಯಪ್ರವೇಶಿಸಿ ತಾರತಮ್ಯ ನೀತಿಯನ್ನು ಸರಿಪಡಿಸಬೇಕು. ಮಲತಾಯಿ ಧೋರಣೆ ಮುಂದುವರಿದರೆ ಕಾಂಗ್ರೆಸ್‌ನಿAದ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆನಂದ ಜಾಧವ, ಸದಾನಂದ ಡಂಗನವರ, ಹನುಮಂತ ಕೊರವರ, ಭೀಮಣ್ಣ ಬಡಿಗೇರ, ಬಸವರಾಜ ಮಲಕಾರಿ, ಆನಂದ ಸಿಂಗನಾಥ, ವಸಂತ ಅರ್ಕಾಚಾರ, ಮಾಧುರಿ ಧಾರವಾಡ, ಕಲಾವತಿ ಗಿರಿಯಣ್ಣವರ, ಜ್ಯೋತಿ ವಾಲಿಕಾರ, ಈಶ್ವರ ಶಿವಳ್ಳಿ, ಬಿ.ಎಚ್. ಪೂಜಾರ, ಮಂಜುನಾಥ ಭೋವಿ, ಸೂರಜ ಗವಳಿ, ಶಾರುಖ ಮುಲ್ಲಾ, ಭೀಮಣ್ಣ ಹೊನಕೇರಿ, ಅನೀಲ ಬುನಿಯನ್, ಮಹೇಶ ಹುಲ್ಲಣ್ಣವರ, ಇತರರಿದ್ದರು.