ಹಾಸನ; ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೀಳು ಮತ್ತು ಅವಮಾನಕಾರಿ ಭಾಷೆಯಲ್ಲಿ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಕಾಂಗ್ರೆಸ್ ಎಸ್‌ಸ್ಸಿ-ಎಸ್ಟಿ ಘಟಕದಿಂದ ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಕೆ.ಮಹೇಶ್ ಮಾತನಾಡಿ, ಪ್ರಿಯಾಂಕ ಖರ್ಗೆ ರಾಜ್ಯದ ಯುವ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕ ರಾಜಕಾರಣದ ಸಂಕೇತ ಅಂತಹವರ ವಿರುದ್ಧ ಮಾತನಾಡುವವರ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಬುದ್ಧಿವಂತ ದಲಿತ ನಾಯಕನಾಗಿದ್ದು, ರಾಷ್ಟ್ರಮಟ್ಟದ ಕೃತಕ ಬುದ್ಧಿಮತ್ತೆ ಸಮೀಕ್ಷೆಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ. ಇಂತಹ ಪ್ರತಿಭಾನ್ವಿತ ಯುವ ರಾಜಕಾರಣಿಯ ವಿರುದ್ಧ ಅಸಭ್ಯ ಶಬ್ದಗಳಲ್ಲಿ ಮಾತನಾಡುವುದು ಅಕ್ಷಮ್ಯ ಎಂದರು.
ಪ್ರಿಯಾಂಕ್ ಖರ್ಗೆ ಅವರ ವೇಗದ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ಅವರ ವಿರುದ್ಧ ಕೀಳು, ಅಸಹ್ಯ ಮತ್ತು ಅಮಾನವೀಯ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ. ಅಂತಹವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಎಂ.ಕೆ. ದೇವಪ್ಪ ಮಲ್ಲಿಗೆವಾಳ್, ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಡಿ.ಸಿ. ಸಣ್ಣಸ್ವಾಮಿ, ರಂಜಿತ್ ಗೊರೂರು, ವೆಂಕಟೇಶ್, ಅಶೋಕ್ ನಾಯಕರಹಳ್ಳಿ, ಪ್ರಸನ್ನ, ಹರೀಶ್, ಆರೀಫ್, ಪರಮೇಶ್ ಇತರರು ಇದ್ದರು.