ಜಿಲ್ಲೆ

ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ

Hassan

ಚನ್ನರಾಯಪಟ್ಟಣ: ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಬಾರದೆಂದು ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಪಟ್ಟಣದ ರೈಲು ನಿಲ್ದಾಣದ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ದೇಶದ ಸಾರ್ವಜನಿಕ ಸಂಪತ್ತನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ. ದೇಶದ 109 ರೈಲು ನಿಲ್ದಾಣಗಳನ್ನು ಖಾಸಗಿ ಕಂಪನಿಗೆ ಒಪ್ಪಿಸಿ ಅವುಗಳ ಮೂಲಕ 151 ಖಾಸಗಿ ರೈಲುಗಳನ್ನು ಓಡಿಸಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈಲ್ವೆ ಇಲಾಖೆ ದೇಶದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆಯಾಗಿದೆ. ಈ ಸೇವೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಳ್ಳುವ ಮೂಲಕ ಅದನ್ನು ಇನ್ನಷ್ಟು ಬಲಪಡಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಖಾಸಗೀಕರಣ ಸಲ್ಲದು ಎಂದು ಆಗ್ರಹಿಸಿದರು.

ಸ್ಟೇಷನ್ ಮಾಸ್ಟರ್ ಸುಧೀರ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು. ಸಿಐಟಿಯು ಮುಖಂಡರಾದ ಮಂಜುನಾಥ್, ವಾಸುದೇವ್, ಸಿ.ಎಸ್. ರಂಗಸ್ವಾಮಿ, ಕರಿಯಪ್ಪ ಹಾಜರಿದ್ದರು.